ಬೆಂಗಳೂರು: ಪದೇ ಪದೇ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುತ್ತಿದ್ದ ನಟ ಚೇತನ್ ಗೆ ಕೇಂದ್ರ ಸರ್ಕಾರ ವೀಸಾ ರದ್ದುಗೊಳಿಸಿದೆ .
ಈ ಸಂಬಂಧ ಕೇಂದ್ರ ಗೃಹ ಇಲಾಖೆಯಿಂದ ನಟ ಚೇತನ್ ಅಹಿಂಸಾ ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ವೀಸಾ ರದ್ದುಗೊಳಿಸಲಾಗಿದೆ ಎಂದಿದೆ. ಅಲ್ಲದೇ ಈ ಬಗ್ಗೆ ನಟ ಚೇತನ್ ಗೆ ನೋಟಿಸ್ ನೀಡಿರುವಂತ ಕೇಂದ್ರ ಗೃಹ ಇಲಾಖೆಯೂ, ಪತ್ರ ತಲುಪಿದ 15 ದಿನಗಳ ಒಳಗೆ ಓಸಿಐ ಕಾರ್ಯ ಅನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ನಟ ಚೇತನ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನಾನು 23 ವರ್ಷಗಳ ಕಾಲ ಇದ್ದಿದ್ದು, ಓದಿದ್ದು ಅಮೇರಿಕಾದಲ್ಲಿ . ಆ ಬಳಿಕ ನಾನು ಸೇವೆಸಲ್ಲಿಸಲು ಭಾರತಕ್ಕೆ ಬಂದಿದ್ದೇನೆ. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿ ಕೊಂಡೆ. ಹಲವು ಹೋರಾಟ ಮಾಡಿದ್ದೇನೆ. ಬ್ರಾಹ್ಮಣ್ಯ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ ನನ್ನ ಮೇಲೆ 295ಎ ಪ್ರಕರಣ ದಾಖಲಿಸಲಾಗಿದೆ. ಒಂದೂವರೆ ವರ್ಷದ ಹಿಂದಯೇ ನನಗೆ ನೀಡಲಾಗಿದ್ದ ಗನ್ ಮ್ಯಾನ್ ಹಿಂಪಡೆಯಲಾಗಿದೆ ಎಂದರು.
ನಾನು ಒಂದು ಟ್ವಿಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಲಾಗಿದೆ ಎಂಬುದಾಗಿ ಹೇಳಿ ಮೂರು ದಿನ ಜೈಲಿಗೆ ಕಳುಹಿಸಿದ್ದರು. ನನಗೆ ಒವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಅಥವಾ ಸಾಗರೋತ್ತರ ಭಾರತೀಯ ನಾಗರೀಕ ವೀಸಾ ನೀಡಲಾಗಿದೆ. ಹತ್ತು ತಿಂಗಳ ಹಿಂದೆ ನೀವು ತುಂಬಾ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ. ನಿಮ್ಮ ವೀಸಾ ಯಾಕೆ ರದ್ದು ಮಾಡಬಾರದು ಎಂಬುದಾಗಿ ಕೇಂದ್ರ ಗೃಹ ಇಲಾಖೆಯಿಂದ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದಕ್ಕೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಬಂದಿದ್ದೇನೆ. ನಿನ್ನೆ ಮತ್ತೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಿ ಎಂಬುದಾಗಿ ನನ್ನ ವೀಸಾ ರದ್ದುಗೊಳಿಸಿ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
ನಾನು ಎಲ್ಲಿಯೂ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಉದ್ದೇಶ ಪೂರ್ವಕವಾಗಿಯೇ ನನ್ನ ಮೇಲೆ ಈ ರೀತಿಯಾದಂತ ಪಿತೂರಿ ನಡೆಸಲಾಗುತ್ತಿದೆ. ಈ ದೇಶದಲ್ಲಿ ನಾನು ಇರಬಾರದು ಅಂತ ವೀಸಾ ರದ್ದುಗೊಳಿಸಲಾಗಿದೆ. ಆದರೆ ನಾನು ಇದಕ್ಕೆಲ್ಲಾ ಜಗ್ಗುವುದಿಲ್ಲ. ಈಗಾಗಲೇ ವಕೀಲರ ಬಳಿಯಲ್ಲಿ ಮಾತನಾಡಿದ್ದು, ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಾಗಿ ತಿಳಿಸಿದರು.