ನವದೆಹಲಿ: ದೇಶದ ಸಹಕಾರ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಮುಂದಡಿ ಇಟ್ಟಿರುವ ಕೇಂದ್ರ ಸರ್ಕಾರ, ದೇಶಾದ್ಯಂತ 2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ/ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘವನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ಕೃಷಿ ಸಾಲ ನೀಡಿಕೆಯನ್ನು ಇನ್ನಷ್ಟು ತಳಮಟ್ಟಕ್ಕೆ ವಿಸ್ತರಿಸುವ ಮತ್ತು ಅದನ್ನು ಇನ್ನಷ್ಟು ವ್ಯಾಪಕ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಮುಂದಿನ 5 ವರ್ಷದಲ್ಲಿ ಸಂಘಗಳು ಸ್ಥಾಪನೆ ಆಗಲಿವೆ. ಪ್ರಸ್ತುತ ದೇಶದಲ್ಲಿ 63 ಸಾವಿರ ಪ್ರಾಥಮಿಕ ಕೃಷಿ ಸಾಲ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈಗಲೂ ದೇಶದ 1.6 ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳು ಮತ್ತು 2 ಲಕ್ಷ ಪಂಚಾಯತ್‌ಗಳು ಯಾವುದೇ ಹೈನುಗಾರಿಕೆ ಸಹಕಾರ ಸಂಘಗಳನ್ನು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಪಂಚಾಯತ್‌ಗೆ ಒಂದರAತೆ ಪ್ರಾಥಮಿಕ ಕೃಷಿ ಸಾಲ ಸಂಘ/ ಹೈನುಗಾರಿಕೆ ಸಂಘ ಸ್ಥಾಪಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಜೊತೆಗೆ, ದೊಡ್ಡ ಮಟ್ಟದ ನೀರಾವರಿ ಸೌಲಭ್ಯ ಇದ್ದು ಕಾರ್ಯ ಎನ್ನಿಸುವ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ಕರಾವಳಿ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕಾರ್ಯ ಸಾಧು ಎನ್ನಿಸುವ ಸ್ಥಳಗಳಲ್ಲಿ ಕನಿಷ್ಠ ಒಂದಾದರೂ ಮೀನುಗಾರಿಕೆ ಸಹಕಾರ ಸಂಘ ಸ್ಥಾಪನೆಯ ಗುರಿಯನ್ನು ಸರ್ಕಾರ ರೂಪಿಸಿದೆ.
ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಸಾಲ ಸಂಘ/ಹೈನುಗಾರಿಕೆ/ಮೀನುಗಾರಿಕೆ ಸಂಘ ಸ್ಥಾಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಯೋಜನೆಯನ್ನು ಒಂದುಗೂಡಿಸಿ ಈ ಯೋಜನೆ ಜಾರಿಗೊಳಿಸಲಾಗುವುದು. ಇದರಡಿ ಹೊಸ ಸಹಕಾರ ಸಂಘ ಸ್ಥಾಪನೆ ಜೊತೆಗೆ ಅವುಗಳನ್ನು ಆಧುನಿಕ ಮೂಲಸೌಕರ್ಯಗಳ ಮೂಲಕ ಉನ್ನತೀಕರಿಸಲಾಗುವುದು ಎಂದು ತಿಳಿಸಿದರು.
ಈ ಸಂಘಗಳ ಸ್ಥಾಪನೆಯಿಂದ ರೈತರಿಗೆ ಅಗತ್ಯ ಸಾಲ ಸೌಲಭ್ಯ ಲಭ್ಯವಾಗುವ ಜೊತೆಗೆ ಅವರ ಅದಾಯ ಹೆಚ್ಚಳಕ್ಕೆ ನೆರವಾಗಲಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಹೊಸ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ ಎಂದು ಠಾಕೂರ್ ತಿಳಿಸಿದರು.