ಕಾರ್ಕಳ: ಇತ್ತೀಚೆಗಷ್ಟೇ ಕೇರಳ ಪೊಲೀಸರಿಂದ ಬಂಧಿತಳಾಗಿದ್ದ ಕುಖ್ಯಾತ ನಕ್ಸಲ್ ನಾಯಕಿ ಶ್ರೀಮತಿ(26) ಎಂಬಾಕೆಯನ್ನು ಕಾರ್ಕಳ ಪೊಲೀಸರು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದು ಅತ್ಯಂತ ಬಿಗುಭದ್ರತೆಯಲ್ಲಿ ಕಾರ್ಕಳದ ಕೋರ್ಟಿಗೆ ಹಾಜರುಪಡಿಸಿದರು.
ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದ ಶೃಂಗೇರಿ ದೇವಳಕೊಪ್ಪ ನಿವಾಸಿ ಶ್ರೀಮತಿಯನ್ನು ವಶಕ್ಕೆ ಪಡೆದಿದ್ದು, ಡಿವೈಎಸ್ಪಿ ಅರವಿಂದ ಕಲಗುಜ್ಜಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಇಂದು ಆಕೆಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ
ಕಳೆದ ೨೦೧೧ರ ನ.೧೯ರಂದು ಈದು ಗ್ರಾಮದ ಗುಂಡಿ ಸದಾಶಿವ ಗೌಡ ಅವರನ್ನು ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ಶ್ರೀಮತಿ ಮತ್ತು ಅವಳ ತಂಡವು ಅಪಹರಿಸಿ ಕಬ್ಬಿನಾಲೆಯಲ್ಲಿ ಹತ್ಯೆಗೈದ ಆರೋಪದ ಮೇಲೆ ಶ್ರೀಮತಿ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯ ಬಳಿಕ ಆಕೆ ನಾಪತ್ತೆಯಾಗಿದ್ದಳು. ಇದೀಗ ಈ ಪ್ರಕರಣದ ನಡೆದು ಬರೋಬ್ಬರಿ ೧೩ ವರ್ಷಗಳ ಬಳಿಕ ಈಕೆಯ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಕಾರಣಕ್ಕಾಗಿ ಸದಾಶಿವ ಗೌಡ ಅವರನ್ನು ಹತ್ಯೆ ಮಾಡಲಾಗಿದೆ ಹಾಗೂ
ಆಕೆ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಕುರಿತು ಶ್ರೀಮತಿಯ ವಿಚಾರಣೆ ನಡೆಯುತ್ತಿದ್ದು ೨೦೦೮ರಲ್ಲಿ ಬೋಜ ಶೆಟ್ಟಿ ಅವಳಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಕೆ, ಕರ ಪತ್ರ ಹಂಚಿಕೆ ಸೇರಿದಂತೆ ಹಲವಾರು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಆಕೆಯ ಮೇಲಿರುವ ಪ್ರಮುಖ ಪ್ರಕರಣವಾಗಿದೆ.
ಪೊಲೀಸ್ ಠಾಣೆಗೆ ಬಿಗು ಭದ್ರತೆ:
ಕಾರ್ಕಳ ನಗರ ಠಾಣೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ನಕ್ಸಲ್ ನಿಗ್ರಹ ದಳದ ಪೊಲೀಸರು ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಠಾಣೆಯೊಳಗೆ ಬಿಡುತ್ತಿದ್ದಾರೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ