ಕೊಲ್ಲಂ: ಕೇರಳದಲ್ಲಿ ಭಾರತೀಯ ಸೇನೆಯ ಯೋಧನ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ ನಿಷೇಧಿತ ಪಿಎಫ್‌ಐ ಸಂಘಟನೆಯ ದುಷ್ಕರ್ಮಿಗಳು ಯೋಧನ ಬೆನ್ನ ಮೇಲೆ ಪಿಎಫ್ಐ ಎಂದು ಬರೆದಿರುವ ಅಮಾನುಷ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಭಾರತೀಯ ಸೇನೆಯ ಯೋಧನ ಮೇಲೆ ದಾಳಿ ನಡೆಸಿದ 5 ರಿಂದ 6 ಜನರಿದ್ದ ದಾಳಿಕೋರರು ಆತನನ್ನು ಕಟ್ಟಿ ಹಾಕಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಬಳಿಕ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ಪಿಎಫ್‌ಐ ಎಂದು ಬರೆದು ವಿಕೃತಿ ಮೆರೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಯೋಧ ಶೈನ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನಲ್ಲಿರುವಂತೆ ಕೊಲ್ಲಂನ ಕಡಕ್ಕಲ್ ಬಳಿ ತನ್ನ ಮನೆಯ ಸಮೀಪದಲ್ಲಿರುವ ರಬ್ಬರ್ ತೋಟದಲ್ಲಿ ಭಾನುವಾರ ರಾತ್ರಿ ಆರು ಜನರಿದ್ದ ಗುಂಪು ತನ್ನ ಮೇಲೆ ದಾಳಿ ನಡೆಸಿದೆ. ದಾಳಿಯ ನಂತರ ನನ್ನ ಕೈಗಳನ್ನು ಟೇಪ್‌ನಿಂದ ಸುತ್ತಿ ಬೆನ್ನಿನ ಮೇಲೆ ಪಿಎಫ್ಐ ಎಂದು ಹಸಿರು ಬಣ್ಣದ ಪೈಂಟ್‌ನಲ್ಲಿ ಬರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗ ಕಡಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಶೈನ್ ಕುಮಾರ್ ರಾಜಸ್ತಾನದಲ್ಲಿ ಸೇವೆಯಲ್ಲಿದ್ದರು. ಸೇನೆಯ ಇಲೆಕ್ಟ್ರಾನಿಕ್ ಹಾಗೂ ಮೆಕಾನಿಕಲ್ ಕೆಡರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಜೆಯಲ್ಲಿ ಕೇರಳದ ಕೊಲ್ಲಂನ ಕಡಕ್ಕಲ್ ಬಳಿ ಇರುವ ತಮ್ಮ ಊರಿಗೆ ಬಂದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರೊಂದಿಗೆ ಭಾರತೀಯ ಸೇನೆ ಸಂಪರ್ಕದಲ್ಲಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಉಗ್ರ ಚಟುವಟಿಕೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ರಾಷ್ಟ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ ಈ ಸಂಘಟನೆಯ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಹೀಗಿದ್ದೂ, ಈ ಸಂಘಟನೆಯೂ ತೆರೆಮರೆಯಲ್ಲಿ ಕಾರ್ಯಾಚರಿಸುತ್ತಿದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.