ನವದೆಹಲಿ : ಅತ್ಯಂತ ಮಹತ್ವದ ಕ್ರಮವೊಂದರಲ್ಲಿ, ಕ್ರಿಪ್ಟೋ ಕರೆನ್ಸಿ ಹಾಗೂ ವರ್ಚುವಲ್ ಆಸ್ತಿಯ ವ್ಯವಹಾರಗಳನ್ನು ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವ್ಯಾಪ್ತಿಗೆ ತಂದಿದೆ. ಈ ಸಂಬಂಧ ಕೇಂದ್ರ ವಿತ್ತ ಸಚಿವಾಲಯ ಬುಧವಾರ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ ದೇಶ-ವಿದೇಶಗಳ ಡಿಜಿಟಲ್ ಆಸ್ತಿಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸುವಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.
ಅಧಿಸೂಚನೆಯಲ್ಲಿ, ‘ವರ್ಚುವಲ್ ಡಿಜಿಟಲ್ ಸ್ವತ್ತುಗಳನ್ನು ಒಳಗೊಂಡ ವಹಿವಾಟುಗಳಲ್ಲಿ ಪಾಲ್ಗೊಳ್ಳುವಿಕೆಯು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) (PMLA) ಅಧೀನಕ್ಕೆ ಒಳಪಟ್ಟಿರುತ್ತದೆ. ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡುವವರ ಆಫರ್‌ಗಳು ಮತ್ತು ವರ್ಚುವಲ್ ಡಿಜಿಟಲ್ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಹಣಕಾಸು ಸೇವೆಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ವರ್ಚುವಲ್ ಡಿಜಿಟಲ್ ಆಸ್ತಿಗಳ ವಿನಿಮಯ ಹಾಗೂ ವರ್ಗಾವಣೆ ಕೂಡ ಪಿಎಂಎಲ್‌ಎ ಕಾಯ್ದೆಯಡಿ ಬರುತ್ತದೆ’ ಎಂದು ಸ್ಪಷ್ಟಪಡಿಸಲಾಗಿದೆ.
ಕ್ರಿಪ್ಟೋಕರೆನ್ಸಿಗಳ ಕಾನೂನು ಮತ್ತು ನಿಬಂಧನೆಗಳನ್ನು ಭಾರತವು ಇನ್ನೂ ಅಂತಿಮಗೊಳಿಸಿಲ್ಲ, ಆದರೆ ರಿಸರ್ವ್ ಬ್ಯಾಂಕ್ , ಅವುಗಳ ಬಳಕೆಯ ವಿರುದ್ಧ ಹಲವು ಬಾರಿ ಎಚ್ಚರಿಕೆ ನೀಡಿದೆ. ಕ್ರಿಪ್ಟೋಕರೆನ್ಸಿಗಳು ನಕಲಿ ಯೋಜನೆಗೆ ಹೋಲುವುದರಿಂದ ಅವುಗಳನ್ನು ನಿಷೇಧಿಸಬೇಕು ಎಂದು ರಿಸರ್ವ್ ಬ್ಯಾಂಕ್ ಹಲವು ಬಾರಿ ಒತ್ತಾಯಿಸಿದೆ. ಅದರ ನಡುವೆಯೇ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕ್ರಿಪ್ಟೋವನ್ನು ತರಲಾಗಿದೆ.
ಆದಾಯ ತೆರಿಗೆ ಕಾಯಿದೆಯ ಪ್ರಕಾರ, ‘ವರ್ಚುವಲ್ ಡಿಜಿಟಲ್ ಆಸ್ತಿ’ಯು ಕ್ರಿಪ್ಟೋಗ್ರಾಫಿಕ್ ವಿಧಾನದ ಮೂಲಕ ಸಿದ್ಧಪಡಿಸಲಾದ ಯಾವುದೇ ಮಾಹಿತಿ, ಕೋಡ್, ಸಂಖ್ಯೆ ಅಥವಾ ಟೋಕನ್ ಅನ್ನು ಸೂಚಿಸುತ್ತದೆ.