ದೆಹಲಿ: ಸ್ವಯಂಘೋಷಿತ ಉಗ್ರಗಾಮಿ ಸಿಖ್ ಧರ್ಮ ಪ್ರಚಾರಕ ಮತ್ತು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿದ್ದ ಅಮೃತಪಾಲ್ ಸಿಂಗ್ನ್ನು ಪಂಜಾಬ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಇದಕ್ಕಿಂತ ಮುನ್ನ ಪಂಜಾಬ್ ಪೊಲೀಸರ ವಿಶೇಷ ತಂಡ ಆತನ ಆರು ಸಹಚರರನ್ನು ಬಂಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಮೊಗಾ ಜಿಲ್ಲೆಯಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಿದ್ದು, ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಜಿ 20 ಕಾರ್ಯಕ್ರಮ ಮುಗಿಯಲಿ ಎಂದು ಸರ್ಕಾರ ಕಾಯುತ್ತಿತ್ತು ಎಂದು ಮೂಲಗಳು ಹೇಳಿವೆ.
ಕಳೆದ ವರ್ಷ ಫೆಬ್ರುವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಅವರು ಆರಂಭಿಸಿದ “ವಾರಿಸ್ ಪಂಜಾಬ್ ದೇ” ಎಂಬ ಮೂಲಭೂತ ಸಂಘಟನೆಯನ್ನು ಅಮೃತಪಾಲ್ ಮುನ್ನಡೆಸುತ್ತಿದ್ದಾರೆ. ಏಳು ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರನ್ನು ಬೆನ್ನಟ್ಟಿದ್ದು, ಜಲಂಧರ್‌ನ ಶಾಕೋಟ್ ತೆಹಸಿಲ್‌ನ ಮೆಹತ್‌ಪುರ ಗ್ರಾಮದಲ್ಲಿ ಬಂಧಿಸಿದ್ದಾರೆ. ಅಮೃತಪಾಲ್ ಸಿಂಗ್ ಭೇಟಿಯ ಪೂರ್ವ ಮಾಹಿತಿ ಇದ್ದ ಕಾರಣ ಪೊಲೀಸರು ಎಲ್ಲಾ ರಸ್ತೆಗಳನ್ನು ಮುಚ್ಚಿ ಶಾಹಕೋಟ್‌ನಲ್ಲಿ ಬೃಹತ್ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.
ಪಂಜಾಬ್ ಪೊಲೀಸರು ಟ್ವೀಟ್ ಮೂಲಕ, ಎಲ್ಲಾ ನಾಗರಿಕರಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ವಿನಂತಿಸಿದ್ದು ಭಯಪಡಬೇಡಿ. ನಕಲಿ ಸುದ್ದಿ ಅಥವಾ ದ್ವೇಷದ ಭಾಷಣವನ್ನು ಹರಡಬೇಡಿ ಎಂದು ಹೇಳಿದ್ದಾರೆ.