ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಬ್ಬರಿಗೆ ಉಡುಪಿ ಜಿಲ್ಲಾ ನ್ಯಾಯಾಲಯವು ಸುಧೀರ್ಘ 4 ವರ್ಷಗಳ ಕಾಲ ವಿಚಾರಣೆ ನಡೆಸಿ ಕೊನೆಗೂ ಶಿಕ್ಷೆ ಹಾಗೂ ದಂಡ ಪ್ರಕಟಿಸಿ ಆದೇಶಿಸಿದೆ.
ಆಂಧ್ರಪ್ರದೇಶದ ಹೈದರಾಬಾದ್ ಅಮೀರ್‌ಪೇಟೆ ನಿವಾಸಿ ತಿಪಿರ್ ನೇನಿ ಆದಿತ್ಯ(21) ಹಾಗೂ ತೆಲಂಗಾಣದ ಖಾನಾಪುರಂ ಜಿಲ್ಲೆಯ ಹಾವೇಲಿಯ ಮೊಗಿಲ ಹೇಮಂತ್ ರೆಡ್ಡಿ(20) ಎಂಬ ಇಬ್ಬರು ಆರೋಪಿಗಳಿಗೆ ತಲಾ 50 ಸಾವಿರ ದಂಡ ಹಾಗೂ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ಹಿನ್ನಲೆ: ತಿಪಿರ್ ನೇನಿ ಆದಿತ್ಯ ಹಾಗೂ ಮೊಗಿಲ ಹೇಮಂತ್ ರೆಡ್ಡಿ ಎಂಬವರು 2019ರ ಅಕ್ಟೋಬರ್ 27ರಂದು ಉಡುಪಿ ತಾಲೂಕಿನ ಮೂಡನಿಡಂಬೂರು ಗ್ರಾಮದ ಶಂಕರನಾರಾಯಣ ದೇವಸ್ಥಾನದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಅಂದಿನ ಸೈಬರ್ ಕ್ರೆöÊಂ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾಗಿದ್ದ ಲಕ್ಷö್ಮಣ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಬಂಧಿತರಿAದ 4 ಕೆಜಿ ಗಾಂಜಾ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇಬ್ಬರು ಆರೋಪಿಗಳು 2019ರಲ್ಲಿ ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಗಾಂಜಾ ಮಾರಾಟ ದಂಧೆ ನಡೆಸುತ್ತಿದ್ದರು.
ಆರೋಪಿಗಳಿಬ್ಬರ ವಿರುದ್ಧ ದಾಖಲಾದ ಪ್ರಕರಣದಲ್ಲಿ 2019ರಲ್ಲಿ ಅಂದಿನ ಸೆನ್ ಪೊಲೀಸ್ ನಿರೀಕ್ಷಕರಾಗಿದ್ದ ಸೀತಾರಾಮ.ಪಿ ಭಾಗಶಃ ತನಿಖೆ ನಡೆಸಿದ್ದರು. ಬಳಿಕ 2020ರಲ್ಲಿ ಪೊಲೀಸ್ ನಿರೀಕ್ಷಕರಾಗಿದ್ದ ರಾಮಚಂದ್ರ ನಾಯಕ್ ಪ್ರಕರಣದ ವಿಚಾರಣೆ ಮುಂದುವರಿಸಿ ಪ್ರಕರಣದ ಕುರಿತ ಎಫ್ ಎಸ್ ಎಲ್ ವರದಿ ಪಡೆದು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ಕುರಿತು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆದ ಬಳಿಕ ಜೂನ್ 7ರಂದು ಬುಧವಾರ ನ್ಯಾಯಾಧೀಶರಾದ ಶಾಂತಿವೀರ ಶಿವಪ್ಪ ವಿಚಾರಣೆ ನಡೆಸಿ ಆರೋಪಿಗಳಿಗೆ ತಲಾ 50 ಸಾವಿರ ದಂಡ ಹಾಗೂ 2 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ಆರೋಪಿಗಳ ವಿಚಾರಣೆ ನಡೆಸಿ, ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.