ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಇಂದಿಗೆ 10 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.
ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರರಿಂದ ದಾಳಿಯಾದ ಬಳಿಕ ತಿರುಗಿಬಿದ್ದ ಇಸ್ರೇಲ್ ಪ್ರತಿ ದಾಳಿ ಮಾಡುತ್ತಿದ್ದು, ಗಾಜಾ ಪಟ್ಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈಗ ಮತ್ತೊಂದು ಮಾರಕ ದಾಳಿಗೆ ಇಸ್ರೇಲ್ ಪಡೆಗಳು ಸಜ್ಜಾಗಿವೆ.
ಇಸ್ರೇಲಿ ಗಡಿ ಪಟ್ಟಣಗಳ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ ಹಮಾಸ್ ಉಗ್ರಗಾಮಿಗಳ ಬೆನ್ನಟ್ಟಲು ಸೈನಿಕರು ಗಾಜಾ ಪಟ್ಟಿಗೆ ತೆರಳಲು ಸಿದ್ಧವಾಗುತ್ತಿದ್ದಂತೆ ಇಸ್ರೇಲಿ ಸೇನೆಯು “ಹಮಾಸ್ ಅನ್ನು ನಾಶಮಾಡಲು” ಪ್ರತಿಜ್ಞೆ ಮಾಡಿದೆ.
ಗಾಜಾ ಮೇಲೆ ಆಕ್ರಮಣ ಮುಂದುವರೆಸಲು ಸೈನ್ಯ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಹಮಾಸ್ ನಿಯಂತ್ರಿತ ಗಾಜಾದ ಮೇಲೆ ವಾಯು ದಾಳಿ ಮಾಡಿದ್ದ ಇಸ್ರೇಲ್, ಪ್ರಮುಖ ಕಟ್ಟಡಗಳನ್ನೇ ನಿರ್ನಾಮ ಮಾಡಿದೆ. ಅಲ್ಲದೆ ಪ್ರದೇಶಕ್ಕೆ ಆಹಾರ ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಯುದ್ಧವು ಕಳೆದ ಶನಿವಾರ ಪ್ರಾರಂಭವಾದಾಗಿನಿಂದ ಕನಿಷ್ಠ 3,200 ಜೀವಗಳನ್ನು ಬಲಿ ತೆಗೆದುಕೊಂಡಿದೆ.