Share this news

ನವದೆಹಲಿ: ಆತ್ಮನಿರ್ಭರ ಭಾರತ ಪರಿಕಲ್ಪನೆಯ ಭಾಗವಾಗಿ ದೇಶೀಯವಾಗಿ ವೆಬ್ ಬ್ರೌಸರ್ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದ್ದು, ಇಂತಹ ಕಂಪನಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.ಈ ಮೂಲಕ ಗೂಗಲ್ ಕ್ರೋಮ್, ಮೊಝಿಲ್ಲಾ ಫೈರ್ ಫಾಕ್ಸ್, ಮೈಕ್ರೋಸಾಫ್ಟ್ ಎಡ್ಜ್ , ಒಪೆರಾ ಮತ್ತು ಇತರ ಬ್ರೌಸರ್‌ಗಳಿಗೆ ಸಡ್ಡು ಹೊಡೆಯಲು ಭಾರತ ಸರ್ಕಾರ ಮುಂದಾಗಿದೆ.

2024ರ ಅಂತ್ಯದ ವೇಳೆಗೆ ಭಾರತ ತನ್ನದೇ ಆದ ಬ್ರೌಸರ್ ಹೊಂದಲು ತೀರ್ಮಾನ ಮಾಡಿದ್ದು, ಬ್ರೌಸರ್ ಅಭಿವೃದ್ಧಿಪಡಿಸಲು ದೇಶೀಯ ಸ್ಟಾರ್ಟ್ ಅಪ್, ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರ ಆಹ್ವಾನ ನೀಡಿದ್ದು, ಸಂಪೂರ್ಣವಾಗಿ ಆರ್ಥಿಕ ಬೆಂಬಲ ಒದಗಿಸುವ ಭರವಸೆ ನೀಡಿದೆ. ಈ ಬ್ರೌಸರ್‌ಗಳು ಡಿಜಿಟಲ್ ಸಿಗ್ನೇಚರ್‌ಗಳನ್ನು ಒದಗಿಸುವುದರ ಜೊತೆಗೆ, ದೇಶೀಯ ಭಾಷೆಗಳಿಗೆ ಬೆಂಬಲ ನೀಡಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಮುಂದಡಿ ಇಟ್ಟಿರುವ ಭಾರತ ತನ್ನ ಡಿಜಿಟಲ್ ಭವಿಷ್ಯವನ್ನು ಭದ್ರಗೊಳಿಸಬೇಕಾಗಿದೆ. ಹೀಗಾಗಿ ನಾವು ವಿದೇಶಗಳ ವೆಬ್ ಬ್ರೌಸರ್ ಮೇಲೆ ಅವಲಂಬನೆಯಾಗುವುದು ನಮ್ಮ ಭದ್ರತೆ ಮತ್ತು ನಮ್ಮ ನಾಗರಿಕರ ಸುರಕ್ಷತೆಗೆ ಮುಳುವಾಗಬಹುದು. ಆತ್ಮನಿರ್ಭರತೆ ತನ್ನದೇ ಆದ ವೆಬ್ ಬ್ರೌಸರ್ ಸಹ ಹೊಂದಿರಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ಇಂಟರ್ನೆಟ್ ಬಳಕೆದಾರರಲ್ಲಿ ಶೇ.88.47ರಷ್ಟು ಮಂದಿ ಕ್ರೋಮ್, ಶೇ.5.22ರಷ್ಟು ಮಂದಿ ಸಫಾರಿ, ಶೇ.2ರಷ್ಟು ಮಂದಿ ಮೈಕ್ರೋಸಾಫ್ಟ್ ಎಡ್ಜ್, ಶೇ.1.5ರಷ್ಟು ಮಂದಿ ಸ್ಯಾಮ್‌ಸಂಗ್ ಇಂಟರ್ನೆಟ್ , ಶೇ.1.28ರಷ್ಟು ಮಂದಿ ಮೊಝಿಲ್ಲಾ ಫೈರ್‌ಫಾಕ್ಸ್ ಮತ್ತು ಶೇ.1.53ರಷ್ಟು ಮಂದಿ ಇತರ ಬ್ರೌಸರ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *