ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಯೋಜನೆ ಮುಂದಿನ ಆಗಸ್ಟ್ ತಿಂಗಳಿನಿಂದ ಜಾರಿಗೊಳಿಸಲು ಸರ್ಕಾರ ಎಲ್ಲಾ ಸಿದ್ದತೆ ಮಾಡಿಕೊಂಡಿದೆ.
ಇಂಧನ ಇಲಾಖೆ ಈ ನಿಟ್ಟಿನಲ್ಲಿ ಅಂತಿಮ ಸಿದ್ದತೆ ಮಾಡಿಕೊಂಡಿದ್ದು,ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ ಮೊದಲ ವಾರದಿಂದಲೇ ಜನರಿಗೆ ಉಚಿತ ವಿದ್ಯುತ್ ಭಾಗ್ಯ ಸಿಗಲಿದೆ.
ಗ್ರಾಹಕರಿಗೆ ಶೂನ್ಯ ಮೊತ್ತದ ವಿದ್ಯುತ್ ಬಿಲ್ ನೀಡಲು ಎಸ್ಕಾಂಗಳು ಪೂರ್ವಸಿದ್ಧತೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ವಿದ್ಯುತ್ ಬಿಲ್ನಲ್ಲಿ ತಾಂತ್ರಿಕ ಅಂಶಗಳಿರುವ ಕಾರಣಕ್ಕೆ ಸುಲಭವಾಗಿ ಅರ್ಥ ಮಾಡಿಸಲೆಂದು ಬಿಲ್ ಕರಡು ತಯಾರಿಗೆ ಸರ್ಕಾರ ಸಾಕಷ್ಟು ಕಸರತ್ತು ನಡೆಸಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚನೆಯಂತೆ ಇಂಧನ ಇಲಾಖೆ, ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ಜಂಟಿಯಾಗಿ ಶ್ರಮಿಸಿ ಏಕರೂಪ, ಸರಳತೆಯ ಸ್ಪರ್ಶವುಳ್ಳ ಬಿಲ್ ಕರಡು ಸಿದ್ಧಪಡಿಸಿವೆ. ‘ಗೃಹ ಜ್ಯೋತಿ’ಯಡಿ ಉಚಿತ ವಿದ್ಯುತ್ ಸೌಲಭ್ಯ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ ಎಂಬ ಜನರ ಸಂದೇಹ ನಿವಾರಣೆ, ಪ್ರತಿಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ವಿದ್ಯುತ್ ಬಿಲ್ನ ಕರಡು ಪ್ರಸ್ತಾವನೆ ಸಿದ್ಧವಾಗಿದೆ.
ಈ ಕರಡು ಬಿಲ್ ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸೋಮವಾರವೇ ಅನುಮೋದನೆ ನೀಡಲಿದ್ದಾರೆ ಎನ್ನಲಾಗಿದೆ.
ಬಿಲ್ನಲ್ಲಿ ಏನೆಲ್ಲ ಇರಲಿದೆ: ಬಿಲ್ನ ಪ್ರತಿಯೊಂದು ಕಾಲಂ ಸ್ಪಷ್ಟ, ಸ್ಪುಟವಾಗಿರಲಿದೆ. ಹೆಚ್ಚುವರಿಯಾಗಿ ಸರಾಸರಿ ವಿದ್ಯುತ್ ಬಳಕೆ ಯೂನಿಟ್, ಗೃಹಜ್ಯೋತಿಯಡಿ ಪರಿಗಣಿಸಿದ ಯೂನಿಟ್ ಅಂಶಗಳು ಸೇರಲಿವೆ. ನಗರ, ಗ್ರಾಮೀಣ ಪ್ರದೇಶದ ಬಿಲ್ ಸ್ವಲ್ಪ ಭಿನ್ನವಾಗಿರಲಿದೆ. ಹಾಗೆಯೇ ಬೆಸ್ಕಾಂ ಮತ್ತು ಇತರ ನಾಲ್ಕು ಎಸ್ಕಾಂಗಳ ಶುಲ್ಕ, ವಿದ್ಯುತ್ ದರದಲ್ಲೂ ವ್ಯತ್ಯಾಸವಿರಲಿದೆ.
ಆರ್ಆರ್ ಸಂಖ್ಯೆ, ಖಾತೆ ಸಂಖ್ಯೆ, ವೈಯಕ್ತಿಕ ವಿವರ, ಹೆಸರು ಮತ್ತು ವಿಳಾಸ, ಸಂಪರ್ಕದ ವಿವರಗಳಲ್ಲಿ ದರ, ಮಂಜೂರಾದ ಪ್ರಮಾಣ,ಗೃಹಜ್ಯೋತಿ ನೊಂದಣಿ ದಿನಾಂಕ,ಕಳೆದ ವರ್ಷದಲ್ಲಿ ಸರಾಸರಿ ಬಳಕೆಯಾದ ಯೂನಿಟ್ಗಳು, ಅರ್ಹ ಯೂನಿಟ್ಗಳು, ಬಿಲ್ ವಿವರಗಳಲ್ಲಿ ಬಿಲ್ಲಿಂಗ್ ಅವಧಿ, ರೀಡಿಂಗ್ ದಿನಾಂಕ, ಬಿಲ್ ಸಂಖ್ಯೆ, ಬಳಕೆಯ ವಿವರಗಳಲ್ಲಿ ಇಂದಿನ ಮಾಪನ, ಹಿಂದಿನ ಮಾಪನ, ಮಾಪನ ಸ್ಥಿರಾಂಕ, ಬಳಕೆ ಯೂನಿಟ್ಗಳು, ಸರಾಸರಿ, ದಾಖಲಿತ ಬೇಡಿಕೆ, ಪವರ್ ಫ್ಯಾಕ್ಟರ್, ಸಂರ್ಪತ ಪ್ರಮಾಣ, ಸಹಾಯಧನಕ್ಕೆ ಅರ್ಹ ಯೂನಿಟ್, ಪಾವತಿ ಯೂನಿಟ್, ಬಳಸಿದ ಯೂನಿಟ್ ಬಿಲ್ ಮೊತ್ತ, ನಿಗದಿತ ಶುಲ್ಕ, ವಿದ್ಯುತ್ ಶುಲ್ಕ, ಇಂಧನ ಹೊಂದಾಣಿಕೆ ಶುಲ್ಕ, ಶೇ 9 ತೆರಿಗೆ, ಉಪಮೊತ್ತ-1, ಗೃಹ ಜ್ಯೋತಿ ಅನುದಾನ, ನಿಗದಿತ ಶುಲ್ಕ, ಗ್ರಾಮೀಣ ರಿಯಾಯಿತಿ, ಇಂಧನ ಹೊಂದಾಣಿಕ ಶುಲ್ಕ, ಶೇ.9 ತೆರಿಗೆ, ಉಪ ಮೊತ್ತ-2, ಬಿಲ್ ಮೊತ್ತ (1-2), ಹೆಚ್ಚುವರಿ ಶುಲ್ಕಗಳಲ್ಲಿ ದಂಡ, ಹೆವಿ ಲೋಡ್ ದಂಡ, ಬಡ್ಡಿ, ಇತರೆ, ಡೆಬಿಟ್/ಕ್ರೆಡಿಟ್, ಪ್ರಸ್ತುತ ಬೇಡಿಕೆ, ಬಾಕಿ. ಪಾವತಿ ಒಟ್ಟು ಮೊತ್ತ, ಪಾವತಿಗೆ ಕಡೆಯ ದಿನಾಂಕ ನಮೂದಾಗಿರುತ್ತದೆ.
ಬಿಲ್ನ ಹಿಂಬದಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಮಂತ್ರಿ ಕೆ.ಜೆ. ಜಾರ್ಜ್ ಭಾವಚಿತ್ರಗಳು, ಗೃಹಜ್ಯೋತಿ ಲಾಂಛನದಡಿ ಗ್ರಾಹಕರಿಗೆ ಸೂಚನೆಗಳಿವೆ. ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಎಲ್ಟಿ 2ಎ, 2ಬಿ, 3 ಮತ್ತು ಎಲ್ಟಿ 5ರಡಿ ನಿಗದಿತ ಶುಲ್ಕ, ವಿದ್ಯುತ್ ಬಳಕೆ ಶುಲ್ಕ, ಕಿಲೋ ವಾಟ್, ಹಾರ್ಸ್ ಪವರ್, ಯೂನಿಟ್ಗಳು, ಒಟ್ಟು ವಿದ್ಯುತ್ ಬಳಕೆ ಶುಲ್ಕದ ಮೊತ್ತಕ್ಕೆ ಶೇ.9 ತೆರಿಗೆ ವಿವರಗಳು ಇರಲಿವೆ.
ಎಲ್ಲಾ ತೊಡಕುಗಳು ನಿವಾರಣೆಯಾದಲ್ಲಿ ಕಾಂಗ್ರೆಸ್ ಸರ್ಕಾರದ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಜ್ಯೋತಿ ಗೆ ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ಚಾಲನೆ ಸಿಗಲಿದೆ.