Share this news

ಬೆಂಗಳೂರು: ಗೃಹ ಜ್ಯೋತಿ ಸೇರಿದಂತೆ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆಗೆ ಕೆಲವರು 200-300 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದೆ. ಈ ಅರ್ಜಿ ತುಂಬಲು ಏಜೆನ್ಸಿಗಳಾಗಲಿ ಅಥವಾ ಯಾರೇ ಲಂಚ ಪಡೆದರೆ ಅವರ ಪರವಾನಿಗೆ ರದ್ದಾಗುತ್ತದೆ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಇಂದು ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಬೊಮ್ಮಾಯಿ ಅವರು 2 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಬೆಂಗಳೂರಿನ ಅಭಿವೃದ್ಧಿಗೆ ಕೆಲವು ಉತ್ತಮ ಯೋಜನೆ ಹಾಕಿಕೊಂಡಿದ್ದರು. ಆದರೆ ಅವರದ್ದು ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಆ ಯೋಜನೆಗಳನ್ನು ಜಾರಿ ಮಾಡಲು ಬಿಡಲಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಅವರ ಸಲಹೆ, ಅಭಿಪ್ರಾಯ ಪಡೆಯಲಿದ್ದೇನೆ ಎಂದರು.

ಅನ್ನಭಾಗ್ಯ ಯೋಜನೆ ತಡವಾಗಿಯಾದರೂ ಸರಿ ಜಾರಿ ಮಾಡುತ್ತೇವೆ. ಈ ಯೋಜನೆಯ ಜಾರಿ ವಿಚಾರವಾಗಿ ಬಡವರು, ಫಲಾನುಭವಿಗಳು ಹೋರಾಟ ಮಾಡುತ್ತಿಲ್ಲ. ಬದಲಿಗೆ ಹೊಟ್ಟಿ ತುಂಬಿರುವ ಕೆಲವರು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದರು.

ವಿದ್ಯುತ್ ಬೆಲೆ ಏರಿಕೆ ವಿರುದ್ಧ ಹೋರಾಟದ ಬಗ್ಗೆ ಕೇಳಿದಾಗ, ‘ನಾವು ಎಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡಿದ್ದೇವೆ? ಅವರದೇ ಸರ್ಕಾರ ಇದ್ದಾಗ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಚುನಾವಣೆ ಫಲಿತಾಂಶ ಬರುವುದಕ್ಕೂ ಮುನ್ನವೇ ಅವರು ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್ ದರ ಪರಿಷ್ಕರಣ ಸಮಿತಿ ಬೆಲೆ ನಿಗದಿಯಲ್ಲಿ ಸ್ವಂತ ಅಧಿಕಾರ ಹೊಂದಿದೆ ಎಂದರು.

ಗೃಹಲಕ್ಷ್ಮಿ ಯೋಜನೆ ಆರಂಭವಾಗಿಲ್ಲ ಎಂಬ ಪ್ರಶ್ನೆಗೆ, ‘ಮುಖ್ಯಮಂತ್ರಿಗಳ ಜತೆ ಮಾತನಾಡಿ ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ನಾನೇ ಸದ್ಯಕ್ಕೆ ತಡೆದಿದ್ದೇನೆ. ಗೃಹಜ್ಯೋತಿ ಯೋಜನೆ ಅರ್ಜಿ ವಿಚಾರವಾಗಿ ಸರ್ವರ ಸಮಸ್ಯೆ ನೋಡುತ್ತಿದ್ದೀರಿ. ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯೊಡತಿಯೇ ಸ್ವಯಂ ಅರ್ಜಿ ಸಲ್ಲಿಸುವಂತೆ ಸರಳೀಕರಣ ಮಾಡಲಾಗುತ್ತಿದೆ. ಆಲ್ ಲೈನ್ ಹಾಗೂ ಆಫ್ ಲೈನ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ವಿಚಾರವಾಗಿ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ಮಾಡಲಾಗುವುದು ಎಂದು ತಿಳಿಸಿದರು.

ಹೊಸ ಶಾಸಕರ ತರಬೇತಿಗೆ ಧಾರ್ಮಿಕ ಗುರುಗಳ ಭಾಷಣ ಕುರಿತಾಗಿ ಸ್ಪೀಕರ್ ವಿರುದ್ಧ ಎದ್ದಿರುವ ಅಸಮಾಧಾನದ ಬಗ್ಗೆ ಕೇಳಿದಾಗ, ‘ಸ್ಪೀಕರ್ ಅವರಿಗೆ ಅವರದೇ ಆದ ಅಧಿಕಾರ ಇದೆ. ನಾವು ಅದರ ಬಗ್ಗೆ ಮಾತನಾಡಲು ಆಗುವುದಿಲ್ಲ. ನಿಮ್ಮ ಬಳಿ ಏನಾದರೂ ಸಲಹೆ ಇದ್ದರೆ ಅವರಿಗೆ ನೀಡಿ. ಉಳಿದ ವಿಚಾರವನ್ನು ನಾನು ಅವರ ಜತೆ ಖಾಸಗಿಯಾಗಿ ಮಾತನಾಡುತ್ತೇನೆ’ ಎಂದರು.

Leave a Reply

Your email address will not be published. Required fields are marked *