ಬೆಳಗಾವಿ: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಆನಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಬೆನ್ನಲ್ಲೇ ಅರ್ಜಿ ಹೆಸರಿನಲ್ಲಿ 150 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಳ್ಳಾರಿಯಲ್ಲಿ ಈ ರೀತಿ ಪ್ರಕರಣ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಗೃಹಲಕ್ಷ್ಮೀ ಯೋಜನೆಗೆ ಒಂದೂ ರೂ. ಖರ್ಚು ಮಾಡುವುದು ಬೇಡ. ಅರ್ಜಿ ಸಲ್ಲಿಕೆಗೆ ನಿಗದಿಯಾದ 20 ರೂ. ಹಣವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ನನ್ನ ಇಲಾಖೆಯ ಎಲ್ಲ ಸಿಬ್ಬಂದಿಗೂ ಈಗಾಗಲೇ ಸೂಚನೆ ನೀಡಿದ್ದೇನೆ. ಸೇವಾಸಿಂಧು, ಗ್ರಾಮ ಒನ್, ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್‌ನಲ್ಲಿ ಅರ್ಜಿ ಸಲ್ಲಿಸುವ ವೆಚ್ಚವನ್ನು ಸರ್ಕಾರ ಭರಿಸುತ್ತೆ. ಸೇವಾ ಕೇಂದ್ರಗಳಿಗೆ ಇಲಾಖೆಯಿಂದಲೇ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಅರ್ಜಿಗೆ 20 ರೂ. ನೀಡುತ್ತೇವೆ ಎಂದರು.
ಮಧ್ಯವರ್ತಿಗಳ ಆಮಿಷಗಳಿಗೆ ಮಹಿಳೆಯರು ಕಿವಿಗೊಡಬಾರದು. ಅರ್ಜಿ ಸಲ್ಲಿಕೆ ವೇಳೆ ಯಾರೂ ಒಂದು ರೂಪಾಯಿಯನ್ನೂ ಕೊಡಬೇಡಿ. ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಟೈಂ ಲಿಮಿಟ್ಸ್ ಇಲ್ಲ, ಅರ್ಜಿ ಸ್ವೀಕಾರ ಪ್ರಕ್ರಿಯೆ ನಿರಂತರವಾಗಿ ಇರುತ್ತೆ ಎಂದು ಮಾಹಿತಿ ನೀಡಿದರು.
ಇನ್ನು ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಹಾಲು ವಿತರಣೆ ಸ್ಥಗಿತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಳೆದ ನಾಲ್ಕು ತಿಂಗಳಿAದ ನನ್ನ ಇಲಾಖೆಗೆ ಹಾಲು ಪೂರೈಕೆ ಆಗುತ್ತಿಲ್ಲ. ಕೆಎಂಎಫ್‌ನವರು ಹಿಂದಿನ ಬೆಲೆಗೆ ಹಾಲಿನ ಪೌಡರ್ ಕೊಡಲು ಆಗಲ್ಲ ಎಂದು ಸ್ಥಗಿತಗೊಳಿಸಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಬೇಕು ಎಂಬುದೇ ನಮ್ಮ ಉದ್ದೇಶ. ಹಾಲಿನ ಪೌಡರ್ ಕೊಡಲು ಆಗದಿದ್ದರೆ ಬೇರೆ ಪೌಷ್ಟಿಕ ಆಹಾರ ವಿತರಣೆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.