ಬೀದರ್ : ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಜನರು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಗಮನಿಸಿ ರೋಗ ಬರುವುದಕ್ಕೂ ಮುನ್ನವೇ ಅದನ್ನು ತಡೆಯಲು ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ “ಗೃಹ ಆರೋಗ್ಯ” ಯೋಜನೆಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಅವರು ಬುಧವಾರ ನಗರದ ಗುರುನಾನಕ ಆಸ್ಪತ್ರೆಯಲ್ಲಿ ನೂತನ ಶಸ್ತ್ರ ಚಿಕಿತ್ಸೆ ಕೋಣೆ, ಕ್ರಿಟಿಕಲ್ ಕೇರ್ ಯುನಿಟ್, ಲ್ಯಾಬ್ ಘಟಕ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಸರ್ಕಾರ 5 ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಇದಾದ ನಂತರ ಗೃಹ ಆರೋಗ್ಯ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದರು. ಈ ಯೋಜನೆಯಲ್ಲಿ ಜನರ ಬಳಿಗೆ ಹೋಗಿ ಅವರನ್ನು ತಪಾಸಣೆಗೆ ಒಳಪಡಿಸಲು ಮಾಡಲು ಸುಮಾರು 90 ಮೊಬೈಲ್ ಯುನಿಟ್ಗಳನ್ನು ಬಳಸಲಾಗುವುದು. ಪ್ರತಿ ಜಿಲ್ಲೆಗೆ 2ರಂತೆ ಮೊಬೈಲ್ ಯುನಿಟ್ಗಳು ಕಾರ್ಯ ನಿರ್ವಹಿಸಲಿವೆ ಎಂದರು.
ರಾಜ್ಯದ 219 ಕಡೆ ಹೊಸ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಿ ಉತ್ತಮ ಡಯಾಲಿಸಿಸ್ ಸೇವೆ ಕೊಡಲಾಗುವುದು. ಇದನ್ನು ಬರುವ 3 ತಿಂಗಳೊಳಗೆ ಆರಂಭಿಸಲಾಗುವುದು. ರಾಜ್ಯದ ಜಿಲ್ಲಾ, ತಾಲೂಕು ಹಾಗೂ ಸಮುದಾಯ ಕೇಂದ್ರಗಳು ಸಂಪೂರ್ಣವಾಗಿ ಶಿಥಿಗೊಂಡಿದ್ದು, ಅವುಗಳನ್ನು ದುರಸ್ತಿಗೊಳಿಸಿ ಸುಸಜ್ಜಿತಗೊಳಿಸಲು ಸುಮಾರು 200 ಕೋಟಿ ರು. ಅನುದಾನ ಬೇಕಾಗಿದ್ದು, ಈ ಬಾರಿಯೇ ಅದನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು