ಮುಂಬೈ: ಗೋವಾ-ಮುಂಬೈ ಹೆದ್ದಾರಿಯಲ್ಲಿ ಟ್ರಕ್-ಕಾರು ಮುಖಾಮುಖಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.
ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದವರು ಕಾರಿನಲ್ಲಿ ಗೋವಾಕ್ಕೆ ಹಿಂದಿರುಗುತ್ತಿದ್ದಾಗ ನಸುಕಿನ 5 ಗಂಟೆ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 4 ವರ್ಷದ ಮಗು ಪವಾಡಸದೃಶವಾಗಿ ಪಾರಾಗಿದ್ದು, ಆಕೆಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಂಬೈ-ಗೋವಾ ಹೆದ್ದಾರಿಯ ಮೂಲಕ ಇವರು ರತ್ನಗಿರಿಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆ ಮಂಗಾವ್ ತಾಲ್ಲೂಕಿನ ರೆಪೋಳಿ ಗ್ರಾಮದ ಸಮೀಪ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಮಹಿಳೆಯರು ಮತ್ತು ಐವರು ಪುರುಷರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ







