Share this news

ಪ್ರಯಾಗ್‌ರಾಜ್‌ (ಏಪ್ರಿಲ್ 25): ಗುಂಡೇಟಿಗೆ ಮೃತಪಟ್ಟ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಕಚೇರಿಯಲ್ಲಿ ರಕ್ತಸಿಕ್ತ ಚಾಕು, ರಕ್ತಮಿಶ್ರಿತ ಬಟ್ಟೆಗಳು ಪತ್ತೆಯಾಗಿದೆ. ಅತೀಕ್‌ ಹತ್ಯೆ ಬಳಿಕ ಆತನ ಕಚೇರಿಯಲ್ಲಿ ತನಿಖೆ ನಡೆಸಿದ ವೇಳೆ ಚಾಕು, ಹರಿದ ಸ್ಥಿತಿಯಲ್ಲಿದ್ದ ರಕ್ತಮಯ ಬಟ್ಟೆಗಳು ಪತ್ತೆಯಾಗಿದೆ. ಮತ್ತೊಂದು ಕೊಠಡಿಯಲ್ಲಿ ಒಡೆದ ಗಾಜಿನ ಬಳೆಗಳ ತುಂಡುಗಳು ಪತ್ತೆಯಾಗಿದ್ದು, ನೆಲದ ಮೇಲೆ ಮಾಸದ ಹೊಸ ರಕ್ತದ ಕಲೆಗಳು ಪತ್ತೆಯಾಗಿದೆ. ಅತೀಕ್‌ ಅಹ್ಮದ್‌ ಕಚೇರಿಯನ್ನು ಭಾಗಶ: ಕೆಡವಲಾಗಿದೆ. 

ಈ ಕುರಿತು ಮಾತನಾಡಿದ ಪ್ರಯಾಗ್‌ರಾಜ್‌ ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ಸತ್ಯೇಂದ್ರ ಪ್ರಸಾದ್ ತಿವಾರಿ , ರಕ್ತದ ಕಲೆಗಳು, ಚಾಕು ಅತೀಕ್ ಅವರ ಕಚೇರಿಯ ಮೆಟ್ಟಿಲುಗಳ ಬಳಿ ಮತ್ತು ಅಡುಗೆಮನೆಯ ಪಕ್ಕದಲ್ಲಿ ಕಂಡುಬಂದಿರುವುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ ಎಂದು  ಹೇಳಿದ್ದಾರೆ. ಈ ತನಿಖೆಯನ್ನು ಇನ್ನಷ್ಟು ಆಳವಾಗಿ ಮಾಡಲಾಗುವುದು. ಇದಕ್ಕಾಗಿ ವಿಧಿವಿಜ್ಞಾನ ತಂಡವನ್ನು ಕರೆಸಿ ತನಿಖೆ ನಡೆಸಲಾಗುವುದು . “ಎಫ್‌ಎಸ್‌ಎಲ್ ತಂಡವು ತಲುಪಲಿದೆ, ಮತ್ತು ತನಿಖೆ ಮಾಡಲಾಗುತ್ತದೆ. ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತದೆ” ಎಂದೂ ಅವರು ಹೇಳಿದರು.

ಇನ್ನೊಂದೆಡೆ, ಭಾನುವಾರ, ಉತ್ತರ ಪ್ರದೇಶ ಸರ್ಕಾರವು ಗ್ಯಾಂಗ್‌ಸ್ಟರ್‌- ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸದ್ ಅವರನ್ನು ರಾಜ್ಯದಲ್ಲಿ ಎನ್‌ಕೌಂಟರ್‌ನಲ್ಲಿ ಕೊಂದ ಪ್ರಕರಣದ ತನಿಖೆಗಾಗಿ ಇಬ್ಬರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ. ಝಾನ್ಸಿ ಎನ್‌ಕೌಂಟರ್ ಕುರಿತು ತನಿಖೆ ನಡೆಸಲು ಇಬ್ಬರು ಸದಸ್ಯರ ನ್ಯಾಯಾಂಗ ತನಿಖಾ ಸಮಿತಿಯನ್ನು ರಚಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಭಾನುವಾರ ಪ್ರಕಟಿಸಿದೆ.ಈ ಸಮಿತಿಯ ನೇತೃತ್ವವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಜೀವ್ ಲೋಚನ್ ಮೆಹ್ರೋತ್ರಾ ಮತ್ತು ನಿವೃತ್ತ ಡಿಜಿ ವಿಜಯ್ ಕುಮಾರ್ ಗುಪ್ತಾ ವಹಿಸಲಿದ್ದಾರೆ.

ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಅವರನ್ನು ಏಪ್ರಿಲ್ 15 ರಂದು ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳಂತೆ ಬಂದವರು ಗುಂಡಿಕ್ಕಿ ಕೊಂದರು.ಅತೀಕ್ ಅಹ್ಮದ್ 2005 ರ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ನಡೆದ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಸುಮಾರು 100 ಕೇಸ್‌ಗಳು ಇವರ ಮೇಲಿತ್ತು. 

Leave a Reply

Your email address will not be published. Required fields are marked *