ಕಾರ್ಕಳ ಜೂ 14: ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಸ್ತುತ ಕಾಂಗ್ರೆಸ್ ಈ ಹಿಂದೆ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸುತ್ತಿದ್ದು,ಇದಕ್ಕಾಗಿ ಆದಾಯದ ಮೂಲವನ್ನು ಹುಡುಕುತ್ತಿರುವ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರದಲ್ಲಿ ಭಾರೀ ಹೆಚ್ಚಳ ಮಾಡುವ ಮೂಲಕ ಪರೋಕ್ಷವಾಗಿ ಜನರನ್ನು ಲೂಟಿ ಮಾಡಲು ಮುಂದಾಗಿದೆ. ಜನರಿಗೆ ಉಚಿತ ವಿದ್ಯುತ್ ನೀಡುವ ಸೋಗಿನಲ್ಲಿ ಸಣ್ಣ ಹಾಗೂ ಗುಡಿಕೈಗಾರಿಕೆಗಳಲ್ಲಿ ಬಳಕೆಯಾಗುವ ವಿದ್ಯುತ್ ದರದಲ್ಲಿ ಭಾರೀ ಏರಿಕೆಯಾಗಿದ್ದು ಇದರಿಂದ ಸಣ್ಣಕೈಗಾರಿಕೆಗಳು ಅತಂತ್ರಗೊAಡಿವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಹೇಳಿದ್ದಾರೆ.

ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿರುವ ಪರಿಣಾಮ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಸಣ್ಣ ಕೈಗಾರಿಕೆಗಳನ್ನು ನಿರ್ವಹಣೆ ಮಾಡುವುದು ಸುಲಭವಲ್ಲ, ಕಾರ್ಮಿಕರ ವೇತನ, ನಿರ್ವಹಣಾ ವೆಚ್ಚದಿಂದ ಕಂಗಾಲಾಗಿರುವ ಉದ್ಯಮಗಳಿಗೆ ವಿದ್ಯುತ್ ಬೆಲೆ ಏರಿಕೆಯಿಂದ ಮತ್ತಷ್ಟು ಹೊಡೆತ ಬೀಳಲಿದೆ.ಮಾತ್ರವಲ್ಲದೇ ಉದ್ಯೋಗ ನಂಬಿರುವ ಸಾವಿರಾರು ನೌಕರರ ಬದುಕು ಬೀದಿಗೆ ಬಿದ್ದಂತಾಗುತ್ತದೆ. ಗ್ರಾಮೀಣ ಭಾಗದ ಗುಡಿ ಹಾಗೂ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕಿರುವ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಮುಚ್ಚಲು ಮುಂದಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ವಿದ್ಯುತ್ ಬೆಲೆ ಇಳಿಸಿ ಕೈಗಾರಿಕೆಗಳ ನೆರವಿಗೆ ಧಾವಿಸಬೇಕಿದೆ ಎಂದು ನವೀನ್ ನಾಯಕ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗೆ ಒಂದೇ ವರ್ಷ ಗ್ಯಾರಂಟಿ: ನವೀನ್ ನಾಯಕ್ ವ್ಯಂಗ್ಯ
ಮುAದಿನ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊAಡು ಶತಾಯತಗಾಯ 5 ಗ್ಯಾರಂಟಿಗಳನ್ನು ಹೇಗಾದರೂ ಮಾಡಿ ಈಡೇರಿಸಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನೀಡಿರುವ ಗ್ಯಾರಂಟಿಯ ಬಣ್ಣ ಕಳಚಲಿದ್ದು, ಇದು ಕೇವಲ ಒಂದೇ ವರ್ಷದ ಗ್ಯಾರಂಟಿಯಾಗಿದೆ ಎಂದು ನವೀನ್ ನಾಯಕ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಈಗಾಗಲೇ ಘೋಷಣೆ ಮಾಡಿರುವ 5 ಗ್ಯಾರಂಟಿಗಳನ್ನು ಕಾರ್ಯಗತಗೊಳಿಸಲು ವಾರ್ಷಿಕ ಅಂದಾಜು ಕನಿಷ್ಟ 1 ಲಕ್ಷ ಕೋಟಿಗೂ ಮಿಕ್ಕಿ ಅನುದಾವನ್ನು ಮೀಸಲಿರಿಸಬೇಕು. ರಾಜ್ಯದ ವಾರ್ಷಿಕ ಬಜೆಟ್ ನ ಶೇ 30ರಷ್ಟು ಪಾಲನ್ನು ಗ್ಯಾರಂಟಿಗಳಿಗೆ ವಿನಿಯೋಗವಾದರೆ ಉಳಿಕೆ ಮೊತ್ತದಲ್ಲಿ ಅಭಿವೃದ್ಧಿ ಚಟುವಟಿಕೆ,ಸಚಿವರ,ಶಾಸಕರ ವೇತನ, ಸರ್ಕಾರಿ ನೌಕರರ ವೇತನ,ಸರ್ಕಾರದ ಸಾಲ ಮರುಪಾವತಿ ಇತ್ಯಾದಿ ಹೇಗೆ ಸಾಧ್ಯ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಬೇಕು.ಇಂತಹ ವಿಷಮ ಆರ್ಥಿಕ ಪರಿಸ್ಥಿತಿಯಲ್ಲಿ ಗ್ಯಾರಂಟಿಗಳನ್ನು ಈಡೇರಿಸುವ ಶಪಥ ಮಾಡಿರುವ ಕಾಂಗ್ರೆಸ್ ಸರ್ಕಾರ ಜನರಿಂದಲೇ ತೆರಿಗೆ ರೂಪದಲ್ಲಿ ಕಿತ್ತುಕೊಳ್ಳುತ್ತಿರುವುದು ಖಂಡನೀಯ. ಕಾಂಗ್ರೆಸ್ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆನ್ನುವ ಸ್ವಾರ್ಥ ಮನೋಭಾವನೆಯಿಂದ ಜನರ ಬದುಕನ್ನು ಬೀದಿಗೆ ತಳ್ಳಲು ಮುಂದಾಗಿದೆ ಎಂದು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

