ಬೆಂಗಳೂರು: ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಮೊನ್ನೆ ಅಷ್ಟೇ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿದು ಹೋಗಿದ್ದಾರೆ. ಈ ನಡುವೆ ಬಂಡೀಪುರಕ್ಕೆ ಮತ್ತೊಂದು ಗರಿಮೆ ಬಂದಿದ್ದು, ಬಂಡೀಪುರ ಇದೀಗ ದೇಶದಲ್ಲಿ ಉತ್ತಮ ಸಂರಕ್ಷಿತ ಅರಣ್ಯ ಎಂದು ಎರಡನೇ ಪಡೆದಿದೆ.
ಇನ್ನೊಂದೆಡೆ ರಾಜ್ಯದ 5 ಹುಲಿ ರಕ್ಷಿತಾರಣ್ಯಗಳು ಟಾಪ್ 10 ಪಟ್ಟಿಯಲ್ಲಿವೆ ಎನ್ನುವುದು ಮತ್ತೊಂದು ಸಂತಸದ ಸಂಗತಿ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ನ್ಯಾಷನಲ್ ಪಾರ್ಕ್‌ಗೆ ಹುಲಿ ರಕ್ಷಿತಾರಣ್ಯ ಎಂಬ ಹಿರಿಮೆಯೂ ಇದೆ. ದೇಶದಲ್ಲಿ ಮೊದಲಿಗೆ ಘೋಷಣೆಯಾದ 9 ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಬಂಡೀಪುರವೂ ಸೇರಿಕೊಂಡಿತ್ತು. ಇಂತಹ ಬಂಡೀಪುರಕ್ಕೆ ಮತ್ತೊಂದು ಗರಿ ಮೂಡಿದೆ. ದೇಶದಲ್ಲೇ ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇಡೀ ದೇಶದಲ್ಲಿ 53 ಹುಲಿ ರಕ್ಷಿತಾರಣ್ಯ ಪ್ರದೇಶಗಳಿದ್ದು, ನಮ್ಮ ರಾಜ್ಯದ ಬಂಡೀಪುರಕ್ಕೆ ಎರಡನೇ ಸ್ಥಾನ ಲಭಿಸಿರುವುದು ಹೆಮ್ಮೆ ಎನಿಸಿದೆ.
ಪ್ರತಿ 4 ವರ್ಷಕ್ಕೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೇರಿದಂತೆ ಇತರೆ ಮೂರು ಸಂಸ್ಥೆಗಳು ಸೇರಿ, ದೇಶದಲ್ಲಿರುವ ಎಲ್ಲಾ ಹುಲಿ ಸಂರಕ್ಷಿತಾರಣ್ಯಗಳನ್ನ ಮ್ಯಾನೇಜ್ಮೆಂಟ್ ಎಫೆಕ್ಟೀವ್ ಇವಾಲ್ಯುಯೇಷನ್ ನಡೆಸಲಾಗುತ್ತೆ. ಇದೀಗ ಎಲ್ಲಾ ಹುಲಿ ಸಂರಕ್ಷಿತಾರಣ್ಯದ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಬಂಡೀಪುರ ಎರಡನೇ ಸ್ಥಾನ ಪಡೆದಿದ್ರೆ, ನಾಗರಹೊಳೆಗೆ 4ನೇ ಸ್ಥಾನ, ಬಿಳಿಗಿರಿರಂಗನ ಬೆಟ್ಟಕ್ಕೆ 6ನೇ ಸ್ಥಾನ , ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ 9ನೇ ಸ್ಥಾನ ಹಾಗೂ ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ 10ನೇ ಸ್ಥಾನ ಲಭಿಸಿದೆ.