Share this news

ಮೈಸೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ಐದು ವರ್ಷಗಳ ಕಂತನ್ನು ಶಾಸಕ ದಿನೇಶ್ ಗೂಳಿಗೌಡ ಚಾಮುಂಡೇಶ್ವರಿಗೆ ಸಮರ್ಪಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಹಣದ ಚೆಕ್ ಅನ್ನು ಅರ್ಪಿಸುವ ಮೂಲಕ ಸರ್ಕಾರದ ಹರಕೆ ತೀರಿಸಿದರು.

ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ಸಚಿವೆ ಹೆಬ್ಬಾಳ್ಕರ್ ತಮ್ಮ ವೈಯಕ್ತಿಕ ಖಾತೆಯಿಂದ ದೇವಿಗೆ ಸಮರ್ಪಿಸಿದರು.

ಪ್ರತೀ ತಿಂಗಳು ತಾಯಿ ಚಾಮುಂಡೇಶ್ವರಿ ದೇವಿಗೆ ಗೃಹಲಕ್ಷ್ಮಿ ಕಂತನ್ನು ನೀಡುವಂತೆ ಶಾಸಕ ದಿನೇಶ ಗೂಳಿಗೌಡ ಅವರು ಸಿಎಂ‌ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಕ್ಷಣ ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಒಂದೇ ಸಲ ಎಲ್ಲಾ ಕಂತಿನ ಹಣವನ್ನು ನಾಡದೇವಿಗೆ ಅರ್ಪಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಮೊದಲ ಕಂತನ್ನು ಸಿಎಂ, ಡಿಸಿಎಂ ಹಾಗೂ ನಾನು ತಾಯಿ ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದ್ದೇವೆ. ಹಾಗಾಗಿ ಉಳಿದ 59 ತಿಂಗಳ ಹಣವನ್ನು ದೇವಿಗೆ ನಾನು ವೈಯಕ್ತಿಕವಾಗಿ ಸಲ್ಲಿಸುತ್ತಿದ್ದೇನೆ. ಈ ಮೊತ್ತವನ್ನು ಶಾಸಕರಾದ ದಿನೇಶ್ ಗೂಳಿಗೌಡ ಅವರ ಮೂಲಕ ಸಮರ್ಪಿಸುತ್ತಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗೃಹಲಕ್ಷ್ಮೀ ಯೋಜನೆಯು ದೇಶದಲ್ಲಿ, ಅಥವಾ ವಿಶ್ವದಲ್ಲಿ ಜಾರಿಯಾದ ಅತಿ ವಿಶಿಷ್ಟ ಹಾಗೂ ಜನಪ್ರಿಯ ಯೋಜನೆಯಾಗಿದೆ.

ಇದುವರೆಗೆ ರಾಜ್ಯಾದ್ಯಂತ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1 ಕೋಟಿ 10 ಲಕ್ಷ ಯಜಮಾನಿಯರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಯೋಜನೆಗಾಗಿ ನಮ್ಮ ಸರ್ಕಾರ 11,200 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಸುಮಾರು 2,100 ಕೋಟಿ ರೂ.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 6 ಸಾವಿರ ಕೋಟಿ ರೂ. ಜಮಾ ಆಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನುಡಿದಂತೆ ನಡೆದಿದೆ. ನೀಡಿರುವ ವಾಗ್ದಾನದಂತೆ ದೇವಿಗೆ ಹಣ ನೀಡಿ ಹರಕೆ ತೀರಿಸಲಾಗಿದೆ. ಮುಂದಿನ ಐದು ವರ್ಷ ಕೂಡ ನಿರಂತರವಾಗಿ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಲಿವೆ. ಮಾತ್ರವಲ್ಲದೇ 2028 ರ ವಿಧಾನಸಭೆ ಚುನಾವಣೆಯಲ್ಲೂ ನಾವು ಮತ್ತೆ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಪುನಃ, ಪುನಃ ಮುಂದುವರಿಸಲಿದ್ದೇವೆ. ಯೋಜನೆ 3 ತಿಂಗಳಿಗೆ ನಿಲ್ಲುತ್ತದೆ, 6 ತಿಂಗಳಿಗೆ ಸ್ಥಗಿತವಾಗುತ್ತದೆ, ಲೋಕಸಭಾ ಚುನಾವಣೆಯ ನಂತರ ಮುಕ್ತಾಯವಾಗುತ್ತದೆ ಎಂದೆಲ್ಲಾ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ.ವಿಪಕ್ಷಗಳ ಮಾತಿಗೆ ಕಿವಿಗೊಡಬೇಡಿ. ಕೇವಲ ಈ ಐದು ವರ್ಷವಲ್ಲ,ಮುಂದಿನ ಐದು ವರ್ಷವೂ ನಾವೇ ಅಧಿಕಾರದಲ್ಲಿರುತ್ತೇವೆ. ಮತ್ತೆ ಈ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದರು.

 

Leave a Reply

Your email address will not be published. Required fields are marked *