ಹೆಬ್ರಿ: ಹೆಬ್ರಿ ತಾಲೂಕಿನ ಚಾರ ಗ್ರಾಮ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು.
ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ದಿನೇಶ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೃಷ್ಣನಾಯ್ಕ್ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಬಿಜೆಪಿ ಸಮಬಲದ ಹೋರಾಟ ನೀಡಿದೆ.

ಒಟ್ಟು 13 ಸದಸ್ಯ ಬಲದ ಚಾರ ಗ್ರಾಮ ಪಂಚಾಯಿತಿಯಲ್ಲಿ 7 ಬಿಜೆಪಿ ಬೆಂಬಲಿತ,3 ಕಾಂಗ್ರೆಸ್ ಬೆಂಬಲಿತ ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದು,ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿತ್ತು.
13 ಸದಸ್ಯರ ಪೈಕಿ 7 ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದರಿಂದ ಸಹಜವಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಗೆ ಅಡ್ಡಮತದಾನ ಪರಿಣಾಮವಾಗಿ ಅಧ್ಯಕ್ಷ ಪಟ್ಟ ಕೈತಪ್ಪಿದಂತಾಗಿದೆ. ಅಧ್ಯಕ್ಷ ಸ್ಥಾನಕ್ಕೆ
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದಿನೇಶ್ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ದೇವದಾಸ ಶೆಟ್ಟಿ ಸ್ಪರ್ಧಿಸಿದ್ದರು. ಆದರೆ 13 ಮತಗಳ ಪೈಕಿ 7 ಸದಸ್ಯರ ಬಹುಮತವಿದ್ದರೂ ಬಿಜೆಪಿ ಅಭ್ಯರ್ಥಿ ಕೇವಲ 6 ಮತಗಳನ್ನು ಪಡೆಯಲು ಶಕ್ತರಾದರು,ಇತ್ತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದಿನೇಶ್ ಶೆಟ್ಟಿ ಮೂವರು ಪಕ್ಷೇತರ ಬೆಂಬಲಿಗರೊಂದಿಗೆ 7 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಆದರೆ ಉಪಾಧ್ಯಕ್ಷ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದಿದ್ದು ಸಹಜವಾಗಿ ಬಹುಮತ ಹೊಂದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೃಷ್ಣ ನಾಯ್ಕ್ 7 ಮತಗಳನ್ನು ಪಡೆದು ಗೆದ್ದರೆ ಕಾಂಗ್ರೆಸ್ ಬೆಂಬಲಿತ ನಾಗರತ್ನ 6 ಮತಗಳನ್ನು ಪಡೆದು ಪರಾಭವಗೊಂಡರು.
ಒಟ್ಟಿನಲ್ಲಿ ಬಿಜೆಪಿಗೆ ಬಹುಮತ ವಿದ್ದರೂ ಅಡ್ಡಮತದಾನದಿಂದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡು ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳುವಂತಾಯಿತು.

