ಕಾರ್ಕಳ; ಹೆಲ್ಮೆಟ್ ಧರಿಸದ ವಿಚಾರಕ್ಕೆ ವಕೀಲನ ಬೈಕ್ ತಡೆದು ಆತನಿಗೆ ಪೊಲೀಸ್ ಠಾಣೆಗೆ ಕರೆದೊಯ್ದು ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸರ ವರ್ತನೆಯನ್ನು ಖಂಡಿಸಿ ತಪ್ಪಿತಸ್ಥ ಪೊಲೀಸರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಾರ್ಕಳ ಬಾರ್ ಅಸೋಸಿಯೇಷನ್ ವತಿಯಿಂದ ವಕೀಲರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾರ್ಕಳ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಮಾತನಾಡಿ, ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದಿದ್ದಲ್ಲಿ ಸವಾರನಿಗೆ ದಂಡ ವಿಧಿಸಬಹುದು ಆದರೆ ವಕೀಲನಿಗೆ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ, ಈ ಪ್ರಕರಣದಲ್ಲಿ ಆರೋಪಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮಾತ್ರವಲ್ಲದೇ ಪೊಲೀಸರಿಗೆ ಪ್ರತಿಭಟನೆಗೆ ಕಾನೂನಇನಲ್ಲಿ ಅವಕಾಶವಿಲ್ಲದಿದ್ದರೂ ಪೊಲೀಸರ ಕುಟುಂಬದ ಸದಸ್ಯರು ಸಾರ್ವಜನಿಕ ಸ್ಥಳದಲ್ಲಿ ವಾಹನಗಳನ್ನು ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ,ಈ ಪ್ರಕರಣದ ಕುರಿತಂತೆ ಹೈಕೋರ್ಟ್ ಮಧ್ಯಪ್ರವೇಶಿಸಿ ಪೊಲೀಸರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಮಾತ್ರವಲ್ಲದೇ ನಿಯಮಬಾಹಿರವಾಗಿ ಪ್ರತಿಭಟನೆ ನಡೆಸಿದ ಪೊಲೀಸರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಅಲ್ಲದೇ 15 ಜನ ವಕೀಲರ ಮೇಲಿನ ಪ್ರಕರಣವನ್ನು ಹಿಂಪಡೆಯಬೇಕೆAದು ಸುನಿಲ್ ಕುಮಾರ್ ಶೆಟ್ಟಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಹರೀಶ್ ಅಧಿಕಾರಿ, ಕಾರ್ಯದರ್ಶಿ ಅನಿಲ್ ಕುಮಾರ್, ಹಿರಿಯ ವಕೀಲರಾದ ಮಣಿರಾಜ ಶೆಟ್ಟಿ, ಶೇಖರ ಮಡಿವಾಳ, ರವೀಂದ್ರ ಮೊಯ್ಲಿ, ಪದ್ಮಪ್ರಸಾದ್ ಜೈನ್, ವಿಫುಲ್ ತೇಜ್, ರಾಘವ ಕುಕ್ಕುಜೆ ಮುಂತಾದವರು ಉಪಸ್ಥಿತರಿದ್ದರು
