ಚಿಕ್ಕಮಗಳೂರು: ಹೆಲ್ಮೆಟ್ ಧರಿಸದ ಕಾರಣಕ್ಕೆ ವಕೀಲನ ಮೇಲೆ ಹಲ್ಲೆಯ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ 6 ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಿದ ಎಸ್ಪಿಯವರ ಕ್ರಮ ಖಂಡಿಸಿ, ನಗರದಲ್ಲಿ ರಾತ್ರೋರಾತ್ರಿ ಜಿಲ್ಲೆಯ ಪೊಲೀಸರು ತಮ್ಮ ಕುಟುಂಬದ ಸದಸ್ಯರ ಜತೆಗೆ ಸೇರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಬೈಕ್ ಚಾಲನೆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂದು ವಕೀಲನ ಮೇಲೆ ಹಲ್ಲೆಯ ನಂತರ ವಕೀಲರ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿತ್ತು. ಈ ಪ್ರಕರಣ ಸಂಬಂಧ ಕಾನ್ಸ್ ಸ್ಟೇಬಲ್ ಗುರುಪ್ರಸಾದ್ ಎಂಬುವರನ್ನು ಬಂಧಿಸಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕ ಕೂಡಲೇ ಸಮವಸ್ತ್ರದಲ್ಲೇ ರಾತ್ರೋರಾತ್ರಿ ನಗರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಬಿಟ್ಟು ಪ್ರತಿಭಟನೆ ನಡೆಸಿದ್ದರು.
ವಕೀಲ ಪ್ರೀತಮ್ ಪೊಲೀಸರ ಮೇಲೆ ನಡೆಸಿದ ದೌರ್ಜನ್ಯವನ್ನು ಯಾರೂ ಪರಿಗಣಿಸುತ್ತಿಲ್ಲ. ಪೊಲೀಸರೇ ಕಳ್ಳರೆಂದು ಬಿಂಬಿಸಲಾಗುತ್ತಿದೆ. ನಮಗೂ ನ್ಯಾಯ ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತ ಪೊಲೀಸರೊಂದಿಗೆ ಹಿರಿಯ ಅಧಿಕಾರಿಗಳು ಎಸ್ಪಿ ವಿಕ್ರಂ ಮನವೊಲಿಕೆ ಸಭೆ ನಡೆಸಿದರು. ಈ ಸಭೆಯಲ್ಲಿ ಎಫ್ಐಆರ್ ದಾಖಲಾದ 6 ಪೊಲೀಸ್ ಸಿಬ್ಬಂದಿಯನ್ನು ಬಂಧಿಸಬಾರದು, ಠಾಣೆಯಲ್ಲೇ ಪ್ರತಿಭಟನೆ ನಡೆಸಿದ ವಕೀಲರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದರು.
ಪೊಲೀಸ್ ಸಿಬ್ಬಂದಿಗಳ ಪ್ರತಿಭಟನೆಯ ಒತ್ತಡಕ್ಕೆ ಮಣಿದ ಎಸ್ಪಿ ವಿಕ್ರಂ ಪೊಲೀಸರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪೊಲೀಸರು ಪ್ರತಿಭಟನೆ ಹಿಂಪಡೆದರು.