ಬೆಂಗಳೂರು : ಚುನಾವಣಾ ಆಯೋಗವು ರಾಜ್ಯಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈವರೆಗೆ ಬರೋಬ್ಬರಿ 300 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಿದೆ.
ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತನಿಖಾ ಸಂಸ್ಥೆಗಳು ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಬಳಿಕ ಈವರೆಗೆ ವಶಪಡಿಸಿಕೊಂಡು ನಗದು, ಮದ್ಯ ಸೇರಿದಂತೆ ಇತರೆ ವಸ್ತುಗಳ ಮೌಲ್ಯವು 300 ಕೋಟಿ ರೂ. ದಾಟಿದೆ. ಶನಿವಾರ ಒಂದೇ ದಿನ 6.2 ಕೋಟಿ ರೂ. ನಗದು ಜಪ್ತಿ ಮಾಡಲಾಗಿದ್ದು, ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ 5 ಕೋಟಿ ರೂ.ನಗದು ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ 30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 109.14 ಕೋಟಿ ರೂ. ನಗದು, 22.14 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ವಶಕ್ಕೆ ಪಡೆಯಲಾಗಿದೆ. 72.70 ಕೋಟಿ ರೂ. ಮೌಳ್ಯದ 19.14 ಲಕ್ಷ ಲೀಟರ್ ಮದ್ಯ, 18.29 ಕೋಟಿ ರೂ.ಮೌಲ್ಯದ 1,438 ಕೆಜಿ ಮಾದಕ ವಸ್ತುಗಳು, 76.05 ಕೋಟಿ ರೂ. ಮೌಲ್ಯದ 149.42 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಒಟ್ಟು 302.78 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.