ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ.10ರಂದು ಮತದಾನ ನಡೆಯಲಿದ್ದು, ಮೇ.13ರಂದು ಫಲಿತಾಂಶ ಘೋಷಣೆಯಾಗಲಿದೆ. ದಿನಾಂಕ 29-03-2023ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಕಚೇರಿಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರವನ್ನು ತೆರವುಗೊಳಿಸುವಂತೆ ಆಯುಕ್ತರು ಆದೇಶಿಸಿದ್ದಾರೆ.
ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು, ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ಆಯುಕ್ತಾಲಯದ ಎಲ್ಲಾ ಕಾರ್ಯಕ್ರಮಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಮಾದರಿ ನೀತಿ ಸಂಹಿತೆಯನ್ನು ಘೋಷಿಸಲಾಗಿದೆ. ನೀತಿ ಸಂಹಿತೆಯ ಹಿನ್ನಲೆಯಲ್ಲಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಜನೌಷಧಿ ಕೇಂದ್ರಗಳು ಮತ್ತಿತರ ಕಚೇರಿಗಳಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್, ನಾಮಫಲಕಗಳು, ಫಲಕಗಳು, ಜಾಹೀರಾತುಗಳಲ್ಲಿ ಪ್ರದರ್ಶಿಸಲಾದ ಛಾಯಾಚಿತ್ರಗಳನ್ನು ಕೂಡಲೇ ತೆಗೆಯುವಂತೆ ಸೂಚಿಸಿದ್ದಾರೆ.
ಈ ಆದೇಶವನ್ನು ಕಡ್ಡಾಯವಾಗಿ ಜಿಲ್ಲೆಗಳಲ್ಲಿ ಪಾಲಿಸಬೇಕು. ಇದರ ಹೊಣೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳದ್ದಾಗಿರುತ್ತದೆ. ಈ ಕುರಿತು ಆಯುಕ್ತಾಲಯಕ್ಕೆ ದೃಢೀಕರಿಸಬೇಕು. ಮಾದರಿ ನೀತಿ ಸಂಹಿತೆಯು ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಿ, ಕಾರ್ಯನಿರ್ವಹಿಸಲು ಇಲಾಖೆಯು ಬದ್ಧವಾಗಿರುತ್ತದೆ ಎಂದಿದ್ದಾರೆ.
ಇನ್ನೂ ಇಲಾಖೆಯ ಯಾವುದೇ ಐಇಸಿ ಕಾರ್ಯಕ್ರಮಗಳು, ಟೆಂಡರ್ ಪ್ರಕ್ರಿಯೆಗಳು, ವರ್ಗಾವಣೆಗಳು ಇವುಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ ದೂರಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಲು ಆದೇಶಿಸಿದ್ದಾರೆ. ಯಾವುದೇ ಪ್ರಸ್ತಾವನೆಗಳ್ನು ಸೂಕ್ತ ಸಮರ್ಥನೆಯೊಂದಿಗೆ ಹಾಗೂ ಆಯುಕ್ತಾಲಯದ ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸಲು ನಿರ್ದೇಶಿಸಿದ್ದಾರೆ.