ಬೆಂಗಳೂರು: ಜನನ-ಮರಣ ನೋಂದಣಿಗಳ ತಿದ್ದುಪಡಿ ಹಾಗೂ ವಿಳಂಬ ನೋಂದಣಿಯ ಪ್ರಕರಣಗಳಲ್ಲಿ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವುದನ್ನು ತಪ್ಪಿಸಿ ಉಪ ವಿಭಾಗಾಧಿಕಾರಿಗಳಿಗೆ ಜನನ-ಮರಣ ನೋಂದಣಿಗಳ ತಿದ್ದುಪಡಿ ಅಧಿಕಾರವನ್ನು ನೀಡಲು ಅಗತ್ಯ ನಿಯಮಾವಳಿ ತಿದ್ದುಪಡಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈವರೆಗೆ ಜನನ, ಮರಣ ನೋಂದಣಿ ಕಾಯಿದೆ ಸೆಕ್ಷನ್ 13(3)ರ ಅಡಿ ವಿಳಂಬ, ತಿದ್ದುಪಡಿ ಸೇರಿದಂತೆ ಯಾವುದೇ ತಗಾದೆಗಳಿದ್ದರೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸ್ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರ ಇರಲಿಲ್ಲ.
ಇದರಿಂದ ಸಾರ್ವಜನಿಕರು ಅನಗತ್ಯವಾಗಿ ನ್ಯಾಯಾಲಯಗಳಿಗೆ ಅಲೆಯುವಂತಾಗಿದೆ ಎಂಬ ಕಾರಣಕ್ಕೆ ಕರ್ನಾಟಕ ಜನನ, ಮರಣ ನೋಂದಣಿ ತಿದ್ದುಪಡಿ ನಿಯಮಗಳು 2023ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಡಿ ವಿಳಂಬದ ನೋಂದಣಿ ಹಾಗೂ ತಿದ್ದುಪಡಿಯನ್ನು ಉಪ ವಿಭಾಗಾಧಿಕಾರಿ ಹಂತದಲ್ಲೇ ಮಾಡಿಸಿಕೊಳ್ಳಬಹುದು.
ಈ ಕುರಿತು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಜನನ ಹಾಗೂ ಮರಣ ನೋಂದಣಿಯಲ್ಲಿ ವಿಳಂಬ ನೋಂದಣಿ ಹಾಗೂ ತಿದ್ದುಪಡಿ ಅಧಿಕಾರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಅಲ್ಲದೇ, ಜನನ, ಮರಣ ನೋಂದಣಿ ನಿಯಮಗಳು -1999ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ಶುಲ್ಕವನ್ನೂ ಪರಿಷ್ಕರಿಸಲಾಗಿದೆ. ಜನನ, ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿಗೆ ಹಾಲಿ ಇರುವ ವಿಳಂಬ ಶುಲ್ಕವನ್ನು 2 ರೂ. ಬದಲು 100 ರೂ.ಗೆ, 30 ದಿನಗಳ ನಂತರ 5 ರೂ. ಬದಲು 200 ರೂ., 1 ವರ್ಷ ಬಳಿಕದ ನೋಂದಣಿಗೆ 10 ರೂ. ಬದಲಿಗೆ 500 ರೂ.ಗೆ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದರು.