ಜಮ್ಮು (ಮೇ 30): ಜಮ್ಮು ಕಾಶ್ಮೀರದಲ್ಲಿ ಬೀಕರ ಬಸ್ ಅಪಘಾತವಾಗಿದ್ದು, 10 ಜನ ಮೃತಪಟ್ಟಿದ್ದಾರೆ. ಬಸ್ ಸೇತುವೆಯಿಂದ ಜಾರಿ ಕಮರಿಗೆ ಬಿದ್ದ ಪರಿಣಾಮ ವೈಷ್ಣೋದೇವಿ ಸನ್ನಿಧಿಗೆ ಹೋಗುತ್ತಿದ್ದ10 ಜನ ಪ್ರಯಾಣಿಕರು ಮೃತಪಟ್ಟಿದ್ದು, ಸುಮಾರು 55 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡಿದ್ದ ಎಲ್ಲರನ್ನೂ ಸ್ಥಳಾಂತರಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ. ಎಸ್‌ಡಿಆರ್‌ಎಫ್ ತಂಡವೂ ಸ್ಥಳದಲ್ಲಿಯೇ ಇದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಮ್ಮುವಿನ ಎಸ್‌ಎಸ್‌ಪಿ ಚಂದನ್ ಕೊಹ್ಲಿ ಮಾಹಿತಿ ನೀಡಿದ್ದಾರೆ.
ಕಟ್ರಾಗೆ ತೆರಳುತ್ತಿದ್ದ ಬಸ್ ಜಜ್ಜರ್ ಕೋಟ್ಲಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಜಮ್ಮು ಮತ್ತು ಕಾಶ್ಮೀರದ ಹೊರಗಿನಿಂದ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು. ತ್ರಿಕೂಟ ಬೆಟ್ಟಗಳ ಮೇಲಿರುವ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಕಟ್ರಾ ಬೇಸ್ ಕ್ಯಾಂಪ್ ಆಗಿದೆ.
ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.