Share this news

ಪೂಂಚ್ ಡಿ.21:ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರ ಪ್ರಯತ್ನದ ನಡುವೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆಗಳು ಅಶಾಂತಿ ಸೃಷ್ಟಿಸಲು ಹೊಂಚು ಹಾಕುತ್ತಲೇ ಇದ್ದಾರೆ.
ಇದರ ಭಾಗವಾಗಿ ಶುಕ್ರವಾರ ನಸುಕಿನಲ್ಲಿ ಭಯೋತ್ಪಾದಕರು ಜಮ್ಮುವಿನ ಪೂಂಛ್ ಸೆಕ್ಟರ್ ನ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆಸಿ ನಾಲ್ವರು ಭಾರತೀಯ ಯೋಧರನ್ನು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಮೂವರು ಯೋಧರಿಗೆ ಗಾಯಗಳಾಗಿವೆ.

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

ಪೊದೆಯಲ್ಲಿ ಅಡಗಿಕುಳಿತ ಭಯೋತ್ಪಾದಕರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ತಿಂಗಳಲ್ಲಿ ನಡೆದ 2ನೇ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ. ಸೇನಾ ಟ್ರಕ್ ಮೂಲಕ ಸಾಗುತ್ತಿದ್ದ ಯೋಧರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಕಾಡಿನ ಪ್ರದೇಶದಲ್ಲಿ ಸಾಗುತ್ತಿದ್ದ ಸೇನಾ ವಾಹನದ ಮೇಲೆ ಅಡಗಿ ಕುಳಿತಿದ್ದ ಉಗ್ರರು ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ಚಕಮಕಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯ ಸೇನೆ ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ಆರಂಭಿಸಿದೆ. ಇದೀಗ ಇಡೀ ಪ್ರದೇಶ ಸುತ್ತುವರೆದು ಕಾರ್ಯಾಚರಣೆ ಆರಂಭಿಸಲಾಗಿದೆ. ಪೂಂಚ್ ಜಿಲ್ಲೆಯ ಸೂರಾನ್‌ಕೋಟ್ ವಲಯದ ದೇರಾ ಕಿ ಗಾಲಿ ಬಳಿ ಈ ದಾಳಿ ನಡೆದಿದೆ. ನವೆಂಬರ್ ತಿಂಗಳ ಅಂತ್ಯದಲ್ಲಿ ಕಾಶ್ಮೀರದ ರಜೌರಿಯಲ್ಲಿ ಭೀಕರ ಉಗ್ರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಮೂವರು ಯೋಧರು ಹುತಾತ್ಮರಾಗಿದ್ದರು. ಭಾರೀ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಸೇರಿ 4 ಯೋಧರು ಹುತಾ​ತ್ಮ​ರಾಗಿದ್ದರು. ಬಳಿಕ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿ​ತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿತ್ತು.

ರಜೌರಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಮುಂದುವರೆದ ಘರ್ಷಣೆಯಲ್ಲಿ ಗುರುವಾರ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.ಇಬ್ಬರು ಭಯೋತ್ಪಾದಕರ ಪೈಕಿ ಖಾರಿ ಎಂಬಾತ ಲಷ್ಕರ್-ಎ-ತೊಯ್ಬಾದಲ್ಲಿ ಉನ್ನತ ಹುದ್ದೆಯಲ್ಲಿದ್ದ ಭಯೋತ್ಪಾದಕ ನಾಯಕ ಹಾಗೂ ಪಾಕಿಸ್ತಾನಿ ಪ್ರಜೆ ಎಂದು ಗುರುತಿಸಲಾಗಿದೆ. ಅಲ್ಲದೇ ಐಇಡಿ ಪರಿಣಿತನಾಗಿದ್ದ ಈತ ಮರೆಯಲ್ಲಿದ್ದೇ ಗುಂಡು ಹಾರಿಸಿ ಕೊಲ್ಲಬಲ್ಲ (ಸ್ನೈಪರ್‌) ಸಾಮರ್ಥ್ಯದ ತರಬೇತಿ ಪಡೆದವನಾಗಿದ್ದ. ರಜೌರಿ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಇವನನ್ನು ಕಳುಹಿಸಲಾಗಿತ್ತು. ಈತ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದಾನೆ ಎಂದು ಸೇನೆ ತಿಳಿಸಿದೆ. ಕಳೆದೊಂದು ವರ್ಷದಿಂದ ರಜೌರಿಯಲ್ಲಿ ಸಕ್ರಿಯನಾಗಿದ್ದ ಈತ ಇತ್ತೀಚೆಗೆ ನಡೆದಿದ್ದ ಒಂದು ಪ್ರಮುಖ ದಾಳಿಯ ಮಾಸ್ಟರ್‌ ಮೈಂಡ್‌ ಆಗಿದ್ದ ಎನ್ನಲಾಗಿದೆ.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆಗಳು ಗರಿಗೆದರಿ ಜನರು ನಿರ್ಬೀತವಾಗಿ ಓಡಾಡುವಂತಾಗಿತ್ತು. 370 ನೇ ವಿಧಿ ರದ್ದತಿಯನ್ನು ವಿರೋಧಿಸಿ ಕಾಶ್ಮೀರದ ಹುರಿಯತ್ ಕಾನ್ಫರೆನ್ಸ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಈ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಬೆನ್ನಲ್ಲೇ ಉಗ್ರರು ಜಮ್ಮು ಕಾಶ್ಮೀರದಲ್ಲಿ ಪದೇಪದೇ ದಾಳಿ ನಡೆಸಿ ಜನರಲ್ಲಿ ಭಯದ ವಾತಾವರಣ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *