ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಬಳಿ ಕಡಿದಾದ ಇಳಿಜಾರಿನಲ್ಲಿ ಸುಮಾರು 200 ಮೀಟರ್ ಕೆಳಗೆ ಬಸ್ಸೊಂದು ಉರುಳಿಬಿದ್ದ ಪರಿಣಾಮ 38 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಕಿಶ್ತ್ವಾರ್‌ನಿಂದ ಜಮ್ಮುವಿಗೆ ತೆರಳುತ್ತಿದ್ದ ಬಸ್ ಅಸ್ಸಾರ್ ಪ್ರದೇಶದ ಟ್ರುಂಗಲ್ ಬಳಿ ಕಡಿದಾದ ಇಳಿಜಾರಿನಲ್ಲಿ ಪಲ್ಟಿಯಾಗಿ ಈ ದಾರುಣ ಘಟನೆ ಸಂಭವಿಸಿದೆ. ಬಸ್‌ನಲ್ಲಿ 55 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸ್ ಮತ್ತು ರಕ್ಷಣಾ ತಂಡಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಸ್ ಕಿಶ್ತ್ವಾರ್‌ನಿಂದ ಜಮ್ಮುವಿಗೆ ತೆರಳುತ್ತಿದ್ದಾಗ, ದೋಡಾ ಜಿಲ್ಲೆಯ ಅಸ್ಸಾರ್ ಪ್ರದೇಶದ ಟ್ರುಂಗಲ್ ಬಳಿಯ 200 ಮೀಟರ್ ಕೆಳಗೆ ಬಿದ್ದಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿ ದೋಡಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಸಮೀಪದ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಇದುವರೆಗೆ 38 ಜನರು ಸಾವನ್ನಪ್ಪಿದ್ದಾರೆ ಎಂದು ಎಸ್‌ಎಸ್‌ಪಿ ದೋಡಾ ಅಬ್ದುಲ್ ಖಯೂಮ್ ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಸಾಗಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದು, ಗಾಯಗೊಂಡವರನ್ನು ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾ ಆಸ್ಪತ್ರೆ ಕಿಶ್ತ್ವಾರ್ ಮತ್ತು ಜಿಎಂಸಿ ದೋಡಾಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚು ಗಾಯಗೊಂಡವರನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ ಸೇವೆಯನ್ನು ವ್ಯವಸ್ಥೆಗೊಳಿಸಲಾಗುವುದು. ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗಿದೆ ಎಂದಿದ್ದಾರೆ.