Share this news

ಕಾರ್ಕಳ : ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರಿಗೆ ಇನ್ನೋರ್ವ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಶನಿವಾರ ಸಂಜೆ ನಡೆದಿದೆ.

ಮ್ಯಾಕ್ಸಿಮ್ ಡಿಸಿಲ್ವಾ ಎಂಬವರು ಶನಿವಾರ ಸಂಜೆ ಕೆಲಸ ಮುಗಿಸಿ ಕಾರಿನಲ್ಲಿ ಸಾಣೂರಿನ ತಮ್ಮ ಮನೆಗೆ ಹೋಗುವ ರಸ್ತೆಯ ಗೇಟ್ ಬಳಿ ಬಂದವರು ಕಾರಿನಿಂದಿಳಿದು ಗೇಟ್ ತೆಗೆಯಲು ಹೋದಾಗ ಅಂತೋನಿ ಎಲಿಯಾಸ್ ಡಿಸಿಲ್ವಾ ಎಂಬವರು ಮಾಕ್ಸಿಮ್ ರನ್ನು ಅಡ್ಡಗಟ್ಟಿ ನೀನು ಯಾರ ಜಾಗದಲ್ಲಿ ಹೋಗುತ್ತೀಯಾ, ಒಳಗೆ ಹೋದರೆ ನಿನ್ನ ಕೈಕಾಲು ಮುರಿಯುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಲ್ಲಿ ಹಲ್ಲೆ ಮಾಡಲು ಮುಂದಾದಾಗ ಮ್ಯಾಕ್ಸಿಮ್ ಅವರು ಈ ಜಾಗ ನ್ಯಾಯಾಲಯದ ವ್ಯಾಜ್ಯದಲ್ಲಿದೆ ಎಂದಾಗ ಅಂತೋನಿ ಕೇಸು ಮುಗಿಯಲು 10-15 ವರ್ಷಗಳು ಬೇಕಾಗಬಹುದು, ನಿನ್ನ ಹೆಂಡತಿ ಮಕ್ಕಳನ್ನು ಮುಗಿಸದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದಾನೆ.

ಹಲ್ಲೆಯಿಂದ ಮ್ಯಾಕ್ಸಿಮ್ ಡಿಸಿಲ್ವಾ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *