ಹಜಾರಿಬಾಗ್ (ಜಾರ್ಖಂಡ್): ಜಾರ್ಖಂಡ್‌ನ ಹಜಾರಿಬಾಗ್ ಪಟ್ಟಣದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 6 ವರ್ಷದ ಬಾಲಕಿ ಸಜೀವ ದಹನವಾಗಿದ್ದು, ನಾಲ್ವರಿಗೆ ಗಂಭೀರ ಸುಟ್ಟಗಾಯಗಳಾದ ಘಟನೆ ನಡೆದಿದೆ.
ಸೋಮವಾರ ಸಂಜೆ ಮಾಳವಿಯಾ ಮಾರ್ಗದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಕಾರ್ತಿಕ ಪೂರ್ಣಿಮೆಯ ಅಂಗವಾಗಿ ಭಕ್ತರು ಮಣ್ಣಿನ ದೀಪಗಳನ್ನು ಬೆಳಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಾರುಕಟ್ಟೆ ಪ್ರದೇಶದಲ್ಲಿನ ಖಾಸಗಿ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಪಕ್ಕದ ಕಟ್ಟಡಗಳಿಗೆ ಹರಡಿತು. ಮಧ್ಯರಾತ್ರಿಯ ನಂತರವೂ ಮುಂದುವರಿದ ಬೆಂಕಿಯನ್ನು ನಂದಿಸಲಾಯಿತು ಎಂದು ಹಜಾರಿಬಾಗ್ ಜಿಲ್ಲಾ ಪೊಲೀಸ್ ಅಧೀಕ್ಷಕ ಮನೋಜ್ ರತನ್ ಚೌಥೆ ತಿಳಿಸಿದ್ದಾರೆ.
ಘಟನೆಯಲ್ಲಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
















