ಕಾರ್ಕಳ : ಕಳೆದ ಎಂಟು ದಿನಗಳಿಂದ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿನ ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟದ ಪರೀಕ್ಷೆಗಾಗಿ ಒತ್ತಾಯಿಸಿ ಕಳೆದ ಶನಿವಾರದಿಂದ ಸಮಾನ ಮನಸ್ಕ ವೇದಿಕೆಯ ಹೋರಾಟಗಾರರು ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದೀಗ ಶನಿವಾರ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಧರಣಿ ನಿರತರು ತಮ್ಮ ಸತ್ಯಾಗ್ರಹವನ್ನು ವಾಪಾಸ್ ಪಡೆದಿದ್ದಾರೆ. ಒಂದು ತಿಂಗಳೊಳಗೆ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ವಾಪಸ್ ಪಡೆಯಲಾಗಿದೆ ಎಂದು ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಚಿತ್ತರಂಜನ್ ಶೆಟ್ಟಿ ಸ್ಪಷ್ಟಪಡಿಸಿದರು.
ಪ್ರತಿಭಟನೆಯ ಎಂಟನೆಯ ದಿನವಾದ ಶನಿವಾರ ಹಲವರ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿಗಳು ಅವರ ತಪಾಸಣೆಯನ್ನು ನಡೆಸಿ ಪ್ರತಿಭಟನೆಯನ್ನು ಕೈಬಿಡುವಂತೆ, ಮನವಿ ಮಾಡಿದರು .
ಪ್ರತಿಭಟನಾ ನಿರತ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ತಹಸಿಲ್ದಾರ್ ಅನಂತಶಂಕರ ಭೇಟಿ ನೀಡಿ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸ್ವತಃ ಜಿಲ್ಲಾಧಿಕಾರಿಗಳು ಪ್ರತಿಭಟನಾ ನಿರತರಿಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.