ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜುಲೈ.1ರಂದು 10 ಕೆಜಿ ಅಕ್ಕಿ ಕೊಡದಿದ್ದರೆ ರಾಜ್ಯಾಧ್ಯಂತ ಪ್ರತಿಭಟನೆ ಮಾಡುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ. 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ ನಂತರ ಕೊಡಬೇಕು .ಅಕ್ಕಿ ಸಿಗುತ್ತಿಲ್ಲ ಎಂದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇದೇ ವಿಷಯಕ್ಕೆ ಅಕ್ಕಿ ಬರಲ್ಲ ಎಂದು ಕುಂಟು ನೆಪ ಹೇಳಬಾರದು ಎಂದು ಗುಡುಗಿದರು.

ಈಗ ಛತ್ತೀಸ್‌ಗಢದಿಂದ ಅಕ್ಕಿ ತರುತ್ತೇವೆ ಎಂದು ಹೇಳುತ್ತಿದ್ದಾರೆ. ರಾಜ್ಯದ ರೈತರು ಅಕ್ಕಿ ಕೊಡಲು ಬಂದರೆ ಖರೀದಿಸುವುದು ಉತ್ತಮ. ಒಟ್ಟಿನಲ್ಲಿ ಜನರಿಗೆ ಅಕ್ಕಿ ಕೊಡಬೇಕು. ಬಿಜೆಪಿಯವರು ಅಕ್ಕಿ ಕೊಡಲಿ ಎಂದು ನಮ್ಮ ಕಡೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ.ಸರ್ಕಾರ ಘೋಷಿಸಿದಂತೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಜುಲೈ.1 ರಂದು ಕೊಡದೇ ಇದ್ದರೆ ರಾಜ್ಯಾಧ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಅಂದಹಾಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಜುಲೈ.1ರಿಂದ ಎಪಿಎಲ್, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಬೇಕಾಗಿದ್ದ ಅಕ್ಕಿ ಸರಬರಾಜು ಮಾಡುವಂತೆ ಒಪ್ಪಿಕೊಂಡಿದ್ದ ಎಫ್‌ಸಿಐ ನಂತರ ನಿರಾಕರಿಸಿತ್ತು. ಈಗ ಸರ್ಕಾರ ಅಕ್ಕಿ ಹೊಂದಾಣಿಕೆಗಾಗಿ ಸರ್ಕಸ್ ನಡೆಸುತ್ತಿದೆ.

