ಬೆಂಗಳೂರು: ಈ ಬಾರಿ 4 ದಿನ ವಿಳಂಬವಾಗಿ ಜೂನ್ 4 ರಂದು ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಈ ಬಾರಿಯ ಬೇಸಿಗೆ ಸಾಮಾನ್ಯಕ್ಕಿಂತ ದೀರ್ಘವಾಗಬಹುದು ಎಂದು ಅಂದಾಜಿಸಲಾಗಿದೆ. ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆಯೂ ಇರುತ್ತದೆ.
ಈ ವರ್ಷ ಕೇರಳದ ಮೇಲೆ ನೈರುತ್ಯ ಮುಂಗಾರು ಆಗಮನದಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಮಾನ್ಸೂನ್ ಜೂನ್ 4 ರಂದು ಕೇರಳವನ್ನು ತಲುಪುವ ನಿರೀಕ್ಷೆಯಿದೆ. ಮಾನ್ಸೂನ್ ಕಳೆದ ವರ್ಷ ಮೇ 29 ರಂದು, 2021 ರಲ್ಲಿ ಜೂನ್ 3 ಮತ್ತು 2020 ರಲ್ಲಿ ಜೂನ್ 1 ರಂದು ದಕ್ಷಿಣ ರಾಜ್ಯವನ್ನು ತಲುಪಿದೆ ಎಂದು ಹೇಳಿದೆ.
2005 ರಿಂದ ಕೇರಳದ ಮಾನ್ಸೂನ್ ಆರಂಭದ ದಿನಾಂಕಗಳನ್ನು ನೀಡುತ್ತಿದೆ ಎಂದು IMD ಹೇಳಿದೆ. ಕಳೆದ ವರ್ಷ, ಮೇ 27 ರಂದು IMD ಯ ಮುನ್ಸೂಚನೆಯ ಎರಡು ದಿನಗಳ ನಂತರ ಮೇ 29 ರಂದು ಕೇರಳದಲ್ಲಿ ಮಾನ್ಸೂನ್ ಆಗಮಿಸಿತು. ಕಳೆದ 18 ವರ್ಷಗಳಲ್ಲಿ (2005–2022) ಕೇರಳದಲ್ಲಿ ಮಾನ್ಸೂನ್ ಆರಂಭದ ದಿನಾಂಕದ ಮುನ್ನೋಟಗಳು 2015 ಹೊರತುಪಡಿಸಿ ಸರಿಯಾಗಿ ಸಾಬೀತಾಗಿದೆ.
ಭಾರತವು ಕೃಷಿಯನ್ನೇ ಆಧರಿಸಿದ ದೇಶವಾಗಿದ್ದು, ಭಾರತದ ಆರ್ಥಿಕತೆಯು ಮಳೆಯನ್ನು ಅವಲಂಬಿಸಿದೆ. ದೇಶದ ಒಟ್ಟಾರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.75ರಷ್ಟನ್ನು ಮುಂಗಾರು ಮಳೆಯೇ ಒಳಗೊಂಡಿದೆ.ಈ ಬಾರಿ ಮುಂಗಾರು ವಿಳಂಬವಾದರೆ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.