Share this news

ಬೆಂಗಳೂರು: ಜೆಡಿಸ್ ಪಕ್ಷವು ವಿಭಜನೆಗೊಳ್ಳುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿದ್ದು, ಉಚ್ಚಾಟಿತ ನಾಯಕ ಸಿ.ಎಂ.ಇಬ್ರಾಹಿಂ ಅವರ ಗುಂಪು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಎಚ್‌.ಡಿ.ದೇವೇಗೌಡ ಅವರನ್ನು ‘ವಜಾ’ಗೊಳಿಸಿ ಉಚ್ಚಾಟಿತರಾಗಿದ್ದ ಸಿ.ಕೆ.ನಾಣು ಅವರನ್ನು ನೂತನ ‘ರಾಷ್ಟ್ರೀಯ ಅಧ್ಯಕ್ಷ’ರನ್ನಾಗಿ ಆಯ್ಕೆ ಮಾಡಲಾಗಿದೆ. ಸಿ.ಕೆ.ನಾಣು ಅವರು ಅಧ್ಯಕ್ಷರಾಗಿರುವ ಪಕ್ಷಕ್ಕೆ ಚಿಹ್ನೆ ನೀಡಬೇಕು ಎಂದು ಆಯೋಗಕ್ಕೆ ಮನವಿ ಮಾಡಲೂ ನಿರ್ಧರಿಸಲಾಗಿದೆ. ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಸಭೆಯಲ್ಲಿ ಒಟ್ಟು ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ದೇವೇಗೌಡ ಅವರ ವಜಾ, ಸಿ.ಕೆ.ನಾಣು ಅವರು ನೂತನ ಅಧ್ಯಕ್ಷರು ಮತ್ತು ಎನ್‌ಡಿಎಯೇತರ ಪಕ್ಷಗಳ ಪ್ರಮುಖ ನಾಯಕರನ್ನು ಭೇಟಿ ಮಾಡಿ ಪಕ್ಷವನ್ನು ಸಂಘಟಿಸುವ ಹೊಣೆಯನ್ನು ಇಬ್ರಾಹಿಂ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ.

ಸಿ.ಕೆ.ನಾಣು ಅವರು ನೂತನ ಅಧ್ಯಕ್ಷರಾಗಿರುವ ಬಗ್ಗೆ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಅವರು ಓದಿ ಹೇಳಿದರು. ಇದಕ್ಕೆ ಇಬ್ರಾಹಿಂ ಅವರ ನೇತೃತ್ವದಲ್ಲಿ ನಿರ್ಣಯ ಅಂಗೀಕಾರ ಮಾಡಲಾಯಿತು. ಎನ್‌ಡಿಎ ಜತೆ ಜೆಡಿಎಸ್‌ ಕೈ ಜೋಡಿಸುವ ಬಗ್ಗೆ ದೇವೇಗೌಡ ಅವರಾಗಲಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಾಗಲಿ ರಾಜ್ಯಾಧ್ಯಕ್ಷರ ಅಭಿಪ್ರಾಯವನ್ನು ಪರಿಗಣಿಸಿಲ್ಲ. ಜಾತ್ಯಾತೀತ ನಿಲುವನ್ನು ಹೊಂದಿರುವ ಜೆಡಿಎಸ್‌ ಸಿದ್ಧಾಂತವನ್ನು ಗಾಳಿ ತೂರಲಾಗಿದೆ. ತಮಗೆ ಪಕ್ಷದ ಮುಖಂಡರ ಬೆಂಬಲ ಇರುವ ಕಾರಣ ದೇವೇಗೌಡ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಗಿದೆ.

ಪಕ್ಷದಲ್ಲಿನ ಇತರರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಬಿಜೆಪಿಯೊಂದಿಗೆ ಹೆಜ್ಜೆ ಹಾಕಿದರೆ ಇದನ್ನು ಪ್ರಶ್ನಿಸುವ ಅಧಿಕಾರ ಪಕ್ಷದಲ್ಲಿರುವವರಿಗೆ ಇದೆ. ಗಾಂಧೀಜಿ ಅವರ ತತ್ವಗಳನ್ನು ಬಲಿಕೊಟ್ಟು ಬರೀ ಚುನಾವಣೆಯ ಗೆಲುವಿಗಾಗಿ ಬಿಜೆಪಿಯೊಂದಿಗಿನ ಹೊಂದಾಣಿಕೆ ಮಾಡಿಕೊಂಡ ದೇವೇಗೌಡ ಅವರ ವರ್ತನೆ ಖಂಡನೀಯ. ಜಾತ್ಯಾತೀತ ಗುಣವೇ ನಮ್ಮ ಪಕ್ಷದ ಆತ್ಮವಿದ್ದಂತೆ. ಹೀಗಾಗಿ ನಾವು ಪಕ್ಷವನ್ನು ಬೇರೆಯವರಿಗೆ ಅಡ ಇಡುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನನ್ನ ನಿರ್ಣಯವಲ್ಲ. ರಾಷ್ಟ್ರೀಯ ಮಂಡಳಿಯ ತೀರ್ಮಾನವಾಗಿದೆ. ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ ಚುನಾವಣಾ ಆಯೋಗಕ್ಕೆ ಹೇಳುತ್ತೇವೆ. ಸಿ.ಕೆ.ನಾಣು ಅವರು ಅಧ್ಯಕ್ಷರಾಗಿರುವ ಪಕ್ಷಕ್ಕೆ ಚಿಹ್ನೆ ನೀಡಬೇಕು ಎಂದು ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದರು.

ಜಯಪ್ರಕಾಶ್ ನಾರಾಯಣರ ಸಿದ್ಧಾಂತದ ಮೇಲೆ ಜನತಾ ಪಕ್ಷ ಕಟ್ಟಲಾಯಿತು. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾಣು ಅವರಿಗೆ ನೀಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ. ಅಲ್ಲದೇ, ನಿತೀಶ್ ಕುಮಾರ್, ಅಖಿಲೇಶ್ ಯಾದವ್ ಸೇರಿದಂತೆ ಇತರೆ ರಾಜ್ಯಗಳ ಮುಖಂಡರು ಸಹ ಬರಲಿದ್ದಾರೆ ಎಂದು ಹೇಳಿದ ಅವರು, ಅದರ್ಶವಾದಿಗಳು ಮೃತಪಟ್ಟರೂ ಅವರ ಅದರ್ಶ ಶಾಶ್ವತವಾಗಿ ಇರುತ್ತದೆ. ಕೆಲವರು ಬದುಕಿದ್ದರೂ, ಆದರ್ಶ ಬಿಟ್ಟು ಸತ್ತಂತೆ ಇರುತ್ತಾರೆ. 92ನೇ ವಯಸ್ಸಿನಲ್ಲಿ ತಮ್ಮ ಸಿದ್ದಾಂತ ಬಿಟ್ಟು ಕೊಟ್ಟಾರೆ ಎಂದು ದೇವೇಗೌಡ ವಿರುದ್ಧ ಟೀಕಾಪ್ರಹಾರ ನಡೆಸಿದರು.

Leave a Reply

Your email address will not be published. Required fields are marked *