Share this news

ಕಾರ್ಕಳ: ತೆಂಕು ಹಾಗೂ ಬಡಗು ತಿಟ್ಟುಗಳ ಕಲಾ ಸವ್ಯಸಾಚಿ ನಾಟ್ಯ ಮಯೂರ ರಕ್ಷಿತ್‌ ಶೆಟ್ಟಿ ಪಡ್ರೆ ಅವರು ಪ್ರತಿಷ್ಠಿತ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾರ್ಕಳದ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಂದರ್ಭದಲ್ಲಿ ಜ.21ರಂದು ರಾತ್ರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಬಪ್ಪನಾಡು, ಸಸಿಹಿತ್ಲು, ಹೊಸನಗರ, ಎಡನೀರು ಮೇಳದಲ್ಲಿ ಕಲಾಸೇವೆ ಮಾಡಿ ಈಗ ಹನುಮಗಿರಿ ಮೇಳದಲ್ಲಿ ತಿರುಗಾಟ ಮಾಡುತ್ತಿರುವ ನಾಟ್ಯ ಮಯೂರ, ಯಕ್ಷ ಚೈತನ್ಯ ಬಿರುದಾಂಕಿತ ಪಡ್ರೆ ಅವರು, 20 ಕಡೆ ಮಕ್ಕಳಿಗಾಗಿ ಯಕ್ಷಗಾನ ತರಗತಿ ನಡೆಸುವ ಮೂಲಕ ಯಕ್ಷಗಾನ ಉಳಿಸಿ, ಬೆಳೆಸುವ ಕೈಂಕರ್ಯದಲ್ಲೂ ತೊಡಗಿಕೊಂಡಿದ್ದಾರೆ.
ಸುದರ್ಶನ, ಅಭಿಮನ್ಯು, ಮೇನಕೆ, ಭ್ರಮರ ಕುಂತಳೆ, ಸುಭದ್ರೆ, ಪ್ರಭಾವತಿ, ಕೃಷ್ಣ, ಶ್ರೀದೇವಿ, ಅಶ್ವತ್ಥಾಮ, ಸೀತೆ, ಮೋಹಿನಿ, ಮೀನಾಕ್ಷಿ ಇವರಿಗೆ ಪ್ರಸಿದ್ಧಿ ತಂದುಕೊಟ್ಟ ಪಾತ್ರಗಳು. ಎಂ ಎಸ್ಸಿ ಕಂಪ್ಯೂಟರ್ ಸೈನ್ಸ್ ಪದವೀಧರ ಪಡ್ರೆ ಅವರು ಭರತನಾಟ್ಯ ಪ್ರವೀಣ. ಗ್ಲಾಸ್ ಪೇಂಟಿಂಗ್, ರಂಗೋಲಿಯಲ್ಲೂ ನೈಪುಣ್ಯ ಸಾಧಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹಾಗೂ ಚಲನಚಿತ್ರ ನಟ ವಿಘ್ನೇಶ್‌ ಎಂ. ಉಪಸ್ಥಿತರಿರಲಿದ್ದಾರೆ.
ಜ.21 ರಂದು ರಾತ್ರಿ 7.30ರಿಂದ ಸಾಯಿಶಕ್ತಿ ಕಲಾ ಬಳಗ ಮಂಗಳೂರು ತಂಡದಿಂದ ಶ್ವೇತ ಕುಮಾರ ಚರಿತ್ರೆ ಎಂಬ ವಿಶಿಷ್ಟ ಯಕ್ಷನಾಟಕ ಪ್ರದರ್ಶನಗೊಳ್ಳಲಿದೆ.
22ಕ್ಕೆ ಕುಂದೇಶ್ವರ ಜಾತ್ರೆ:
ಜ. 21ರಂದು ಬೆಳಗ್ಗೆ 10.30ರಿಂದ ಪ್ರಾರ್ಥನೆ, ತೋರಣ ಮುಹೂರ್ತ ಗಣಯಾಗ, ಮಹಾಪೂಜೆ, ಸಾಯಂಕಾಲ 7 ಗಂಟೆಗೆ ಆರಾಧನ ಪೂಜೆ ನಡೆಯಲಿದೆ. ಜ.22 ರಂದು ಬೆಳಗ್ಗೆ 8 ಗಂಟೆಗೆ ಪಂಚವಿಂಶತಿ ಕಲಾಧಿವಾಸ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಧ್ವಜಾರೋಹಣ, ಅವಸ್ತುತ ಬಲಿ, ಪಲ್ಲಪೂಜೆ ನಡೆಯಲಿದ್ದು, ಸಂಜೆ 6.30ರಿಂದ ಮಹೋತ್ಸವ, ಉತ್ಸವ ಬಲಿ, ಅವಭೃತ ಕಟ್ಟೆಪೂಜೆ, ದೈವ ಭೇಟಿ, ಅಗ್ನಿಕೇಳಿ, ರಂಗಪೂಜೆಯಾಗಿ ಧ್ವಜಾವರೋಣವಾಗಲಿದೆ. ಜ. 23ರಂದು ನವಕಪ್ರಧಾನ ಹೋಮ, ಸಂಪ್ರೋಕ್ಷಣೆ ಹಾಗೂ ಪ್ರಸಾದ ವಿತರಣೆ. ಧಾರ್ಮಿಕ ಕಾರ್ಯಕ್ರಮಗಳು ಕೌಡೂರು ವೇ.ಮೂ. ಭಗೀರಥ ಭಟ್‌, ಕುಂದೇಶ್ವರ ಕೃಷ್ಣರಾಜೇಂದ್ರ ಭಟ್‌, ರವೀಂದ್ರ ಭಟ್ ನೇತೃತ್ವದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *