ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಶಿವಶಕ್ತಿ ಪಾಯಿಂಟ್‌ನಲ್ಲಿ ಸ್ಲೀಪ್ ಮೋಡ್ ನಲ್ಲಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಅನ್ನು ಮತ್ತೆ ಸಕ್ರಿಯಗೊಳಿಸುವ ಪ್ರಯತ್ನವನ್ನು ಇಸ್ರೋ ಮುಂದುವರಿಸಿದ್ದು, ಈವರೆಗೂ ವಿಕ್ರಮ್ ಹಾಗೂ ಪ್ರಜ್ಞಾನ್ ರೋವರ್ ನಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಎಂದು ಇಸ್ರೋ ತಿಳಿಸಿದೆ. ‘ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಗಳನ್ನು ಎಚ್ಚರಿಸಿರುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂಪರ್ಕ ಸ್ಥಾಪಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಧ್ಯಕ್ಕೆ ಯಾವುದೇ ಸಿಗ್ನಲ್‌ಗಳು ಬಂದಿಲ್ಲ,ಆದರೂ ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯಲಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ತಿಳಿಸಿದೆ.
ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ಸೆಂಟರ್‌ನಿಂದ ಈಗಾಗಲೇ ವಿಕ್ರಮ್ ಲ್ಯಾಂಡರ್ ಹಾಗೂ ರೋವರ್‌ಗೆ ತನ್ನ ಕಮಾಂಡ್ ನೀಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಈ ಎರಡೂ ಸಾಧನಗಳಿಗೆ ಕಮಾಂಡ್ ತಲುಪಿದೆಯೇ, ಅವುಗಳು ಎಚ್ಚರಗೊಂಡ ಸ್ಥಿತಿಯಲ್ಲಿವೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈವರೆಗೂ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕ ಸಾಧಿಸುವ ಎಲ್ಲಾ ಪ್ರಯತ್ನಗಳು ಮುಂದುವರಿಯಲಿದೆ ಎಂದು ಹೇಳಿದೆ. 14 ದಿನಗಳ ರಾತ್ರಿಯ ನಂತರ, ಸೂರ್ಯನ ಬೆಳಕು ಮತ್ತೊಮ್ಮೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಲು ಪ್ರಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಸ್ಲೀಪ್ ಮೋಡ್‌ನಲ್ಲಿ ಇರಿಸಲಾದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಎಚ್ಚರಗೊಳಿಸುವ ಭರವಸೆಯನ್ನು ಇಸ್ರೋ ಇರಿಸಿತ್ತು.
ಇಸ್ರೋ ಸೆಪ್ಟೆಂಬರ್ 4 ರಂದು ಲ್ಯಾಂಡರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಿತ್ತು.ಇದಕ್ಕೂ ಮೊದಲು ಸೆಪ್ಟೆಂಬರ್ 2 ರಂದು ರೋವರ್ ಅನ್ನು ಸ್ಲೀಪ್ ಮೋಡ್‌ಗೆ ಹಾಕಲಾಯಿತು. ಇಸ್ರೋ ಲ್ಯಾಂಡರ್-ರೋವರ್‌ನ ರಿಸೀವರ್‌ಗಳನ್ನು ಆನ್‌ನಲ್ಲಿ ಇರಿಸಿದೆ. ಹಾಗೇನಾದರೂ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಸಿಗ್ನಲ್ ಕಳಿಸದೇ ಇದ್ದಲ್ಲಿ, ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಇಲ್ಲಿಗೆ ಕೊನೆಯಾಗಲಿದೆ ಎಂದು ಇಸ್ರೋ ಈಗಾಗಲೇ ತಿಳಿಸಿತ್ತು. ಆದರೂ ಇಸ್ರೋ ವಿಜ್ಞಾನಿಗಳು ಮತ್ತೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.