ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಸಿಎನ್ ಅಶ್ವತ್ಥ ನಾರಾಯಣ್ ಅವರು ಬುಧವಾರ ಮಂಡ್ಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ, ಟಿಪ್ಪುವನ್ನು ಹೊಡೆದಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದಾಕಿ ಎಂದು ಕರೆ ಕೊಟ್ಟಿದ್ದಾರೆ. ಇದು ರಾಜ್ಯಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸುತ್ತಾರೆ. ರಾಜಕೀಯ ದಿಕ್ಸೂಚಿ ಮಂಡ್ಯದಿAದಲೇ ಕಾಣಬೇಕು. ಇಲ್ಲದಿದ್ರೆ, ಟಿಪ್ಪು ಜಾಗಕ್ಕೆ ಸಿದ್ದರಾಮಯ್ಯ ಬಂದಬಿಡ್ತಾರೆ. ಟಿಪ್ಪು ಬೇಕಾ? ಸಾವರ್ಕರ್ ಬೇಕಾ? ಹುರಿಗೌಡ ನಂಜೇಗೌಡ ಟಿಪುವನ್ನು ಹೊಡದಾಕಿದ ಹಾಗೆ ಸಿದ್ದರಾಮಯ್ಯರನ್ನು ನೀವು ಹೊಡದಾಕಬೇಕು ಎಂದು ಸಿಎನ್ ಅಶ್ವತ್ಥ ನಾರಾಯಣ ಕಾರ್ಯಕರ್ತರಿಗೆ ಕರೆ ಕೊಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಈ ಬಗ್ಗೆ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಪ್ರತಿಕ್ರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಟಿಪ್ಪು ಸುಲ್ತಾನನ್ನು ಹೊಡದಾಕಿದಂತೆ, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹೊಡದಾಕಬೇಕು ಎಂದು ಅಶ್ವತ್ಥ ನಾರಾಯಣ ಹೇಳತಾರೆ. ಅಂದ್ರೆ ಅವರು ಮನುಷ್ಯರೋ.., ರಾಕ್ಷಸರೋ.. ಅಂತ ತಿಳ್ಕೊಳಿ. ನೀವು ನನ್ನನ್ನ ಹೊಡದಾಕೋಕೆ ಬಂದ್ರೆ ನೀವು ಬಿಡ್ತೀರಾ ಎಂದು ಕಾರ್ಯಕರ್ತರನ್ನು ಕೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಟಿಪ್ಪು ಅಧಿಕಾರಕ್ಕೆ ಬಂದ ಹಾಗೆ ಎನ್ನುತ್ತಾರೆ, ನಾನು ಟಿಪ್ಪು, ಸೇವಾಲಾಲ್, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಎಲ್ಲರನ್ನೂ ಗೌರವಿಸ್ತೀನಿ.. ನಾನು ಮನುಷ್ಯತ್ವ ಇರೋನು ಹಿಂದೂಗಳನ್ನು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್ ಎಲ್ಲರನ್ನೂ ಪ್ರೀತಸ್ತೀನಿ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದು, ನನ್ನ ಹತ್ಯೆಗೆ ಡಾ.ಸಿಎನ್ ಅಶ್ವತ್ಥ್ ನಾರಾಯಣ ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಚಿವ ಡಾ.ಸಿಎನ್ ಅಶ್ವತ್ಥ್ ನಾರಾಯಣ ಅವರು ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಟಿಪ್ಪು ರೀತಿಯಲ್ಲಿ ಸಿದ್ದರಾಮಯ್ಯರನ್ನ ಹೊಡೆದು ಹಾಕಿ ಹೇಳಿಕೆ ನೀಡಿದ್ದ ಸಚಿವ ಅಶ್ವಥ್ ನಾರಾಯಣ್, ಟಿಪ್ಪು ವಂಶಸ್ಥರನ್ನು ಹೊಡೆದು ಹಾಕಿ ಎಂದ ನಳಿನ್ ಕುಮಾರ್ ಕಟೀಲ್ ಹೇಳಿಕ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ದೂರು ನೀಡಿದ್ದಾರೆ. ಕೂಡಲೇ ವಿಚಾರಣೆ ನಡೆಸಿ ಬಂಧಿಸಿಬೇಕು ತಪ್ಪಿದಲ್ಲಿ ಮಲ್ಲೇಶ್ವರಂ ಠಾಣೆಯ ಎದುರು ಕಾಂಗ್ರೆಸ್ ನಿಯೋಗವೇ ಪ್ರತಿಭಟನೆ ನಡೆಸಲಾಗುತ್ತದೆ ಕಾನೂನು ಮೂಲಕ ಹೊರಾಟ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ಕೂಡಾ ನೀಡಿದೆ.
ಈ ವಿಚಾರವಾಗಿ ಸಚಿ ಅಶ್ವಥ್ ನಾರಾಯಣ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ವೈಯುಕ್ತಿಕವಾಗಿ ಹೇಳಿಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಿದ್ದರಾಮಯ್ಯಯನ್ನ ಹೊಡೆದು ಹಾಕಿ ಎಂದರೆ ಚುನಾವಣೆಯಲ್ಲಿ ಸೋಲಿಸಿ ಎಂದು ಅರ್ಥ, ಇದೀಗ ನಾನಿನ್ನು ಯುದ್ಧ ಕಾಲದಲ್ಲಿಲ್ಲ ಪ್ರಜಾಪ್ರಭುತ್ವದಲ್ಲಿದ್ದೇನೆ . ಆಕಾರಣಕ್ಕಾಗಿ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಎಂದಿದ್ದೇನೆ . ನನ್ನ ಮಾತಿನಿಂದ ನೋವಾಗಿದ್ರೆ ವಿಷಾದಿಸುತ್ತೇನೆ ಎಂದು ಭಾರೀ ವಿವಾದದ ಬಳಿಕ ಸಚಿವ ಅಶ್ವಥ್ ನಾರಾಯಣ್ ಕ್ಷಮೆಯಾಚಿಸಿದ್ದಾರೆ.