Share this news

ಮೈಸೂರು: ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕೋಣ ಎಂದು ಬಹಿರಂಗ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆ ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕೋಣ ಎಂದು ಸಿದ್ದರಾಮಯ್ಯ ಹತ್ಯೆಗೆ ಅಶ್ವತ್ಥ್ ನಾರಾಯಣ ಬಹಿರಂಗ ಕರೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ವಿಚಾರವಾಗಿ ಅಶ್ವತ್ಥ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಅವರನ್ನು ತಕ್ಷಣ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಜತೆಗೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.

ಅಶ್ವಥ್ ನಾರಾಯಣ್ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ದೇವರಾಜ ದೂರು ನೀಡಿದ್ದರು. ಅಂದಿನ ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಇಂದು ಠಾಣೆಗೆ ತೆರಳಿ ಮತ್ತೆ ದೂರು ಸಲ್ಲಿಸಿದ್ದಾರೆ. ಹಾಗಾಗಿ ಅಶ್ವತ್ಥ್ ನಾರಾಯಣ ವಿರುದ್ಧ ದೂರು ದಾಖಲಿಸಲಾಗಿದೆ. ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಿ ಎಂದು ಫೆಬ್ರವರಿ 15ರಂದು ಮಂಡ್ಯದ ಸಾತನೂರಿನಲ್ಲಿ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದರು.

ವಿವಾದ ಜೋರಾಗುತ್ತಿದ್ದಂತೆ ಎಚ್ಚೆತ್ತ ಅಶ್ವತ್ಥ ನಾರಾಯಣ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದರು. ಮಂಡ್ಯದಲ್ಲಿ ಶಕ್ತಿಕೇಂದ್ರ ಸಭೆಯಲ್ಲಿ ಸಾಂದರ್ಭಿಕವಾಗಿ ಮಾತಾಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ಅಲ್ಲ. ಇಲ್ಲಿ ಸಿದ್ದರಾಮಯ್ಯ ಪ್ರಶ್ನೆ ಉದ್ಭವ ಆಗಲ್ಲ. ಟಿಪ್ಪು ವೈಭವೀಕರಣ ಸಮಾಜದಲ್ಲಿ ಸರಿಯಲ್ಲ.ಮತದಾನದಲ್ಲಿ ಸೋಲಿಸಿ ಅಂತಾ ನನ್ನ ಆಡು ಭಾಷೆಯಲ್ಲಿ ಹೇಳಿದ್ದೇನೆ. ಆ ಕಾಲದಲ್ಲಿ ಯುದ್ಧ ನಡೆಯುತ್ತಿತ್ತು, ಈ ಕಾಲದಲ್ಲಿ ಮತದಾನದ ಮೂಲಕ ಜನ ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅನ್ನೋದು ನನ್ನ ಹೊಡೆದು ಹಾಕಿ ಎಂಬ ಹೇಳಿಕೆಯ ಅರ್ಥವಾಗಿತ್ತು ಎಂದಿದ್ದರು.

Leave a Reply

Your email address will not be published. Required fields are marked *