ಬೆಂಗಳೂರು: ಕೆಲ ತಿಂಗಳ ಹಿಂದೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಈಗ ಇಳಿಕೆಯತ್ತ ಸಾಗಿದೆ. ಕಳೆದ ವಾರ ಒಂದು ಕೆಜಿಗೆ 160 ರಿಂದ 180 ರೂ. ಇದ್ದ ಟೊಮೆಟೊ ಬೆಲೆ ಇಂದು ಕೆಜಿಗೆ ಟೊಮೆಟೊ 80 ರಿಂದ 90 ರೂಪಾಯಿ ಇದೆ. 200ರೂಗೆ ಮಾರಾಟವಾಗಿ ದಾಖಲೆ ಮಾಡಿದ್ದ ಕೆಂಪು ಸುಂದರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು ಆಗಸ್ಟ್ ಅಂತ್ಯದೊಳಗೆ ಮತ್ತಷ್ಟು ಬೆಲೆ ಇಳಿಯುವ ಸಾಧ್ಯತೆ ಇದೆ.
ಟೊಮೆಟೊ ಬೆಲೆ ಇಳಿಕೆಯಾಗುತ್ತಿದ್ದಂತೆ ಟೊಮೆಟೊ ಖರೀದಿಸಲು ಮಹಿಳೆಯರು ಮುಗಿಬಿದ್ದಿದ್ದಾರೆ. ಟೊಮೆಟೊ ಬೆಲೆ ಜಾಸ್ತಿಯಾದಾಗಿನಿಂದ ಮಹಿಳೆಯರು ಟೊಮೆಟೊ ಖರೀದಿಸಲು ಯೋಚಿಸುವಂತಾಗಿತ್ತು. ಸದ್ಯ ಈಗ ಬೆಲೆ ಇಳಿಕೆಯಾಗಿದ್ದು ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.
ಟೊಮೆಟೊ ಇಳುವರಿ ಜುಲೈನಲ್ಲಿ 2.23 ಲಕ್ಷ ಮೆಟ್ರಿಕ್ ಟನ್ ಇದ್ದರೇ, ಆಗಸ್ಟ್ನಲ್ಲಿ ದುಪ್ಪಟ್ಟು ಅಂದರೇ 5.44 ಲಕ್ಷ ಮೆಟ್ರಿಕ್ ಟನ್‌ಗೆ ಏರುವ ಸಾಧ್ಯತೆಗಳಿವೆ. ಹೀಗಾಗಿ ಟೊಮೆಟೊ ದರ ಆಗಸ್ಟ್ ಅಂತ್ಯಕ್ಕೆ ಇಳಿಕೆಯಾಗಬಹುದು ಎನ್ನಲಾಗುತ್ತಿದೆ.
ಉತ್ತರ ಭಾರತದ ಮಾರುಕಟ್ಟೆಗೆ ಹಿಮಾಚಲ ಪ್ರದೇಶದಿಂದ ಹೆಚ್ಚು ಟೊಮೆಟೊ ಬರುತ್ತದೆ. ಆ ರಾಜ್ಯದಲ್ಲಿ ಟೊಮೆಟೊ ಇಳುವರಿ ಜುಲೈನಲ್ಲಿ 2,000 ಮೆಟ್ರಿಕ್ ಟನ್ ಇತ್ತು. ಅದು ಆಗಸ್ಟ್ನಲ್ಲಿ 30,000 ಮೆಟ್ರಿಕ್ ಟನ್‌ಗೆ ವೃದ್ಧಿಯಾಗುವ ನಿರೀಕ್ಷೆ ಇದೆ. ಇದಲ್ಲದೇ ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಮಧ್ಯ ಪ್ರದೇಶಗಳಲ್ಲೂ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೊಬರ್‌ನಲ್ಲಿ ಗಣನೀಯ ಇಳುವರಿ ಬರುವ ಸಾಧ್ಯತೆಗಳಿವೆ.