ನವದೆಹಲಿ: ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿವೆ ಎಂದು 14 ಪ್ರತಿಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇತರ ಪಕ್ಷಗಳು ಸುಪ್ರೀಂ ಕೋರ್ಟ್ನಿಂದ ತಮ್ಮ ಮನವಿಯನ್ನು ಹಿಂತೆಗೆದುಕೊಂಡಿವೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿಯನ್ನು ವಿಚಾರಣೆ ನಡೆಸಿತ್ತು.
2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಬಿಐ ಮತ್ತು ಇಡಿ ದಾಖಲಿಸಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಉಲ್ಲೇಖಿಸಿ ಕಳೆದ ತಿಂಗಳು ವಿರೋಧ ಪಕ್ಷಗಳು ಸಲ್ಲಿಸಿದ ಅರ್ಜಿಯನ್ನು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಸಲ್ಲಿಸಿದ್ದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಶೇಕಡಾ 95 ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ನಾಯಕರ ವಿರುದ್ಧವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ನಾನು ಭವಿಷ್ಯಕ್ಕಾಗಿ ಮಾರ್ಗಸೂಚಿಗಳನ್ನು ಕೇಳುತ್ತಿದ್ದೇನೆ. ಇದು ಸಿಬಿಐ ಮತ್ತು ಇಡಿ ಎರಡೂ ಸಂಸ್ಥೆಗಳ ದುರುಪಯೋಗದ ವಿರುದ್ಧ 14 ಪಕ್ಷಗಳ ಗಮನಾರ್ಹ ಒಮ್ಮುಖವಾಗಿದೆ ಎಂದು ಸಿಂಘ್ವಿ ಹೇಳಿದ್ದಾರೆ.