ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಪುಟ್ಟ ಮಕ್ಕಳಿಗೆ ಹಲವು ಪೌಷ್ಟಿಕ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕೊಡುವುದು ಸಾಮಾನ್ಯವಾಗಿದೆ. ಹೀಗಿರುವಾಗ ದೇಶಾದ್ಯಂತ ಕೋಟ್ಯಂತರ ಮಂದಿ ಸೇವಿಸುವ ಪೌಷ್ಟಿಕ ಹುಡಿ ಬೊರ್ನ್ವಿಟಾವು ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿದೆಯೆಂದು ಆರೋಪಗಳ ಬಗ್ಗೆ ಉತ್ತರಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ವು, ಉತ್ಪಾದಕಸಂಸ್ಥೆಯಾದ ಮೊಂಡೆಲೆಝ್ ಇಂಡಿಯಾ ಇಂಟರ್ನ್ಯಾಶನಲ್ ಗೆ ಬುಧವಾರ ಪತ್ರ ಬರೆದಿದೆ.
ಮಕ್ಕಳು ಕುಡಿಯುವ ಬೋರ್ನ್ವೀಟಾದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ, ತನ್ನ ಎಲ್ಲ ದಾರಿ ತಪ್ಪಿಸುವ ಜಾಹೀರಾತು , ಪ್ಯಾಕೇಜಿಂಗ್ ಹಾಗೂ ಲೇಬಲ್ಗಳನ್ನು ಹಿಂತೆಗೆದುಕೊಳ್ಳುವಂತೆ ಮಕ್ಕಳ ಹಕ್ಕುಗಳ ಆಯೋಗ ‘ಎನ್ಸಿಪಿಸಿಆರ್’ ಬೋರ್ನ್ವೀಟಾಗೆ ಸೂಚಿಸಿದೆ. ಆಯೋಗವು ಬೌರ್ನ್ವೀಟಾಗೆ ನೀಡಿರುವ ನೊಟೀಸ್ನಲ್ಲಿ ಉತ್ಪನ್ನದ ಕುರಿತು 7 ದಿನಗಳೊಳಗಾಗಿ ವಿವರವಾದ ಮಾಹಿತಿಯನ್ನು ನೀಡುವಂತೆ ಸೂಚಿಸಿದೆ.
ಭಾರತೀಯ ಆಹಾರ ಸುರಕ್ಷತಾ ಮಾನದಂಡ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹಾಗೂ ಗ್ರಾಹಕ ರಕ್ಷಣಾ ಕಾಯ್ದೆಯ ಮಾರ್ಗದರ್ಶಿ ಸೂತ್ರಗಳು ಹಾಗೂ ನಿಯಮಾವಳಿಗಳ ಪ್ರಕಾರ ಕಡ್ಡಾಯವಾಗಿರುವ ಉತ್ಪನ್ನದಲ್ಲಿರುವ ಅಂಶಗಳ ವಿವರಗಳನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗವು ಪತ್ರದಲ್ಲಿ ತಿಳಿಸಿದೆ.ತನ್ನ ಈ ಪತ್ರಕ್ಕೆ ಒಂದು ವಾರದೊಳಗೆ ಉತ್ತರಿಸುವಂತೆಯೂ ಅದು ಕಂಪೆನಿಗೆ ಸೂಚಿಸಿದೆ.