ಬೆಂಗಳೂರು :ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ ಸೆ.29ರಂದು ನಡೆಯಲಿರುವ ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ಅಗತ್ಯ ಸೇವೆಗಳಾದ ಹಾಲು,ಪೇಪರ್, ವೈದ್ಯಕೀಯ ಸೇವೆ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಬಂದ್ ಆಗುವ ಸಾಧ್ಯತೆಯಿದೆ.
ನಾಳೆ ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘ ಬೆಂಬಲ ಸೂಚಿಸಿದ್ದರಿಂದ ಎಲ್ಲಾ ಹೋಟೆಲ್ ಗಳು ಬಂದ್ ಆಗಲಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ನಾಳಿನ ಬಂದ್ ಗೆ ಬೆಂಬಲ ನೀಡಿರುವುದರಿಂದ ಚಿತ್ರಮಂದಿರಗಳು ಬಂದ್ ಇರಲಿವೆ. ಶಾಪಿಂಗ್ ಮಾಲ್ ಗಳು ಬಂದಾಗಲಿವೆ, ಆಟೋ, ಕ್ಯಾಬ್ ಓಲಾ, ಉಬರ್ ಸೇವೆಗಳು ಸೇರಿದಂತೆ ಖಾಸಗಿ ಸಾರಿಗೆ ವಾಹನಗಳು ಶುಕ್ರವಾರ ರಸ್ತೆಗೆ ಇಳಿಯುವುದಿಲ್ಲ ಅಲ್ಲದೇ ಬೇಕರಿಗಳು,ಕಿರಾಣಿ ಅಂಗಡಿಗಳು ಬಂದ್ ಆಗಲಿವೆ. ಅಗತ್ಯ ಸೇವೆಗಳಾದ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್ ಗಳು, ಅಂಬುಲೆನ್ಸ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ನಂದಿನಿ ಹಾಲಿನ ಅಂಗಡಿಗಳು ತೆರೆದಿರುತ್ತವೆ.ಅದರೆ ಶಾಲಾ ಕಾಲೇಜುಗಳು, ಮೆಟ್ರೋ ಸೇವೆಗಳ ಬಗ್ಗೆ, ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ಸಂಚಾರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು, ಕರ್ನಾಟಕ ಬಂದ್ ಗೆ ಕರೆ ನೀಡಿವೆ ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಸಿಟಿ ರೌಂಡ್ಸ್ ಹಾಕಲಿದ್ದಾರೆ.
ಕರ್ನಾಟಕ್ ಬಂದ್ ಗೆ ಬೆಂಬಲಿಸಲು ರಾಜ್ಯದ ಜನತೆಗೆ ಮನವಿ ಮಾಡಲಿದ್ದಾರೆ.ಮಧ್ಯಾಹ್ನ 12 ರಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಿಟಿ ರೌಂಡ್ಸ್ ನಡೆಯಲಿದೆ. ಮೈಸೂರು ಬ್ಯಾಂಕ್ ವೃತ್ತದಿಂದ ಸಿಟಿ ರೌಂಡ್ಸ್ ಆರಂಭವಾಗಲಿದ್ದು, ತೆರೆದ ವಾಹನದಲ್ಲಿ ಇಡೀ ಬೆಂಗಳೂರು ನಗರದಾದ್ಯಂತ ಸಂಚರಿಸಿ ಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಿದ್ದಾರೆ.
ಹೋಟೆಲ್ ಮಾಲೀಕರು, ಥಿಯೇಟರ್ ಮಾಲೀಕರು, ಮಾಲ್ ಮಾಲೀಕರು, ಅಂಗಡಿ ಮಾಲೀಕರು, ಕ್ಯಾಬ್, ಆಟೋ, ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ, ಖಾಸಗಿ ಬಸ್ ಚಾಲಕರು, ಎಪಿಎಂಸಿಯ ಮಾಲೀಕರು, ಕಾರ್ಮಿಕರು, ಬೀದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.
