ಕಾರ್ಕಳ:ತಲೆಯಿಲ್ಲದ ಕಬಂಧ ಮನಸ್ಥಿತಿಯವರಿಗೆ ತಲೆ ಬೋಳಿಸುವುದು ಕಷ್ಟವಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದ್ರೆ ತಲೆಬೋಳಿಸಿ ಕೆಪಿಸಿಸಿ ಕಚೇರಿಯ ಮುಂದೆ ಕುಳಿತುಕೊಳ್ಳುವುದಾಗಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಹೇಳಿಕೆಗೆ ಪತ್ರಿಕಾ ಹೇಳಿಕೆಯಲ್ಲಿ ಬಿಪಿನ್ ಪ್ರತಿಕ್ರಿಯಿಸಿದ್ದಾರೆ
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ 5 ಭರವಸೆಗಳನ್ನು ತಾನು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕಾನೂನಾತ್ಮಕ ಬದ್ಧತೆಯೊಂದಿಗೆ ಹಂತಹಂತವಾಗಿ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವ ದಿನಾಂಕ ಘೋಷಿಸಿದೆ. ಇದನ್ನು ಕಂಡು ದೃತಿಗೆಟ್ಟು ದಿಗ್ಭ್ರಮೆಗೊಂಡು ಹತಾಶರಾದ ಬಿಜೆಪಿಯ ನಾಯಕರೆನ್ನಿಸಿಕೊಂಡವರು ತಲೆ ಬೋಳಿಸುವ ಪ್ರತಿಜ್ಞೆಯ ಹಂತಕ್ಕೆ ಇಳಿದದ್ದು ಅವರ ಮನೋ ವೈಫಲ್ಯಕ್ಕೆ ಸಾಕ್ಷಿ. ಇವರ ರಾಜಕೀಯ ನಡೆಯ ಜನವಿರೋಧಿ ನಿಲುವು ಈ ಮೂಲಕ ಬಟಾಬಯಲಾಗಿದೆ. ಬಹುಶ ಕಳೆದ ಐದು ವರ್ಷಗಳಿಂದ ಜನರನ್ನು ಸುಲಿದೇ ಬಲಿದು ಅಧಿಕಾರ ನಡೆಸಿದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ಈ ಜನಪರ ಚಿಂತನೆಯ ಯೋಜನೆಗಳು ತಮ್ಮ ಅಧಿಕಾರ ಹರಣದ ಮಗ್ಗುಲ ಮುಳ್ಳಾಗಿ ಕಾಡಿ ಇಂತಹ ಪ್ರತಿಜ್ಞೆ ಮಾಡುತ್ತಿದ್ದಾರೆ ಎಂದು ಬಿಪಿನ್ ಚಂದ್ರಪಾಲ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಜನಾಭಿವೃದ್ದಿಯ ಕೊಡುಗೆಗಳನ್ನು ಟೀಕಿಸುವುದನ್ನು ಕಾಯಕವಾಗಿಸಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷರು ಈ ಮೊದಲ ಲೋಕಸಭಾ ಚುನಾವಣೆಯ ಮುನ್ನ ದೇಶವಾಸಿಗಳಿಗೆ ನೀಡಿದ ಭರವಸೆಗಳು ಏನಾಗಿವೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಿಪಿನ್ ಚಂದ್ರಪಾಲ್ ಸಲಹೆ ನೀಡಿದ್ದಾರೆ.