ಗುವಾಹಟಿ: ಪಠ್ಯ ಪುಸ್ತಕದಿಂದ ಮೊಘಲ್ ಇತಿಹಾಸವನ್ನು ತೆಗೆದುಹಾಕುವ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆಯೇ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಅನ್ನು ಕೆಡವಬೇಕು ಎಂದು ಮರಿಯಾನಿ ಕ್ಷೇತ್ರದ ಬಿಜೆಪಿ ಶಾಸಕ ರೂಪ್ಜ್ಯೋತಿ ಕುರ್ಮಿ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
ತಾಜ್ ಮಹಲ್ ಇರುವ ಜಾಗದಲ್ಲಿ ದೇವಾಲಯ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಹೇಳಿದ್ದಾರೆ. ಮೊಘಲರು 1500 ರ ದಶಕದಲ್ಲಿ ಭಾರತಕ್ಕೆ ಬಂದ ಆಕ್ರಮಣಕಾರರು. ವಿದ್ಯಾರ್ಥಿಗಳು ಅವರ ಬಗ್ಗೆ ಅಧ್ಯಯನ ಮಾಡಬಾರದು. ವಿದ್ಯಾರ್ಥಿಗಳು ಇತರ ಭಾರತೀಯ ರಾಜರ ಬಗ್ಗೆ ಕಲಿಯಬೇಕು ಎಂದು ರೂಪ್ಜ್ಯೋತಿ ಕುರ್ಮಿ ಹೇಳಿದ್ದಾರೆ.
ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ನ್ನು ಕೆಡವಲು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಅಲ್ಲಿ ವಿಶ್ವದ ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸಬಹುದು ಎಂದು ಕುರ್ಮಿ ಹೇಳಿದ್ದಾರೆ.
ದೇವಸ್ಥಾನವು ಯುನಿಸೆಫ್ ಮಾತ್ರವಲ್ಲದೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗುರುತಿಸಲ್ಪಡುವಂತಿರಬೇಕು. ದೇವಾಲಯವನ್ನು ನಿರ್ಮಿಸಲು ನಾನು ಒಂದು ವರ್ಷದ ಸಂಬಳವನ್ನು ನೀಡುತ್ತೇನೆ ಎಂದಿದ್ದಾರೆ ಕುರ್ಮಿ.