ತೀರ್ಥಹಳ್ಳಿ : ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಉಗ್ರ ಶಾರೀಕ್ ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ ಹೆಚ್ಚಿನ ವಿಚಾರಣೆಗಾಗಿ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಇದೀಗ ಈತನ ಕುರಿತು ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆಸಿದ್ದ 15 ಕ್ಕೂ ಹೆಚ್ಚು ಅಗ್ನಿ ಅವಘಡ ಪ್ರಕರಣಗಳಲ್ಲಿ ಮಂಗಳೂರು ಶಾರಿಖ್ ಕೈವಾಡವಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ.
ಕೋಣಂದೂರಿನಲ್ಲಿ ಲಾರಿಯಲ್ಲಿ ಬೆಂಕಿ ಅವಘಡ , ಆರಗದಲ್ಲಿ ಡೀಸೆಲ್ ಟ್ಯಾಂಕರ್ ನಲ್ಲಿ ಬೆಂಕಿ ಸೇರಿ ತೀರ್ಥಹಳ್ಳಿಯ ಹಲವು ಕಡೆ ಸಂಭವಿಸಿದ ಬೆಂಕಿ ದುರಂತದಲ್ಲಿ ಶಾರೀಖ್ ಕೈವಾಡವಿದೆ ಎನ್ನಲಾಗುತ್ತಿದೆ. ಈ ಪ್ರಕರಣಗಳು ಈ ಹಿಂದೆ ಅಗ್ನಿ ಅವಘಡ ಕೇಸ್ ಎಂದು ದಾಖಲಾಗುತ್ತಿತ್ತು . ಶಾರಿಖ್ ಹಾಗೂ ಈತನ ಟೀಂ ಟ್ರಯಲ್ ಬ್ಲಾಸ್ಟ್ ಗೆ ಮಾರ್ಗದ ಬದಿಯ ವಾಹನಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿದ್ದವು. ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಮೊದಲೇ ತೀರ್ಥಹಳ್ಳಿಯಲ್ಲಿ ಕೂಡ ತಾಲೀಮು ನಡೆಸಿದ್ದನು ಎನ್ನಲಾಗಿದೆ.
ಮಂಗಳೂರು ಕುಕ್ಕಲ್ ಬಾಂಬ್ ಸ್ಟೋಟಕದ ರೂವಾರಿ, ಶಂಕಿತ ಉಗ್ರ ಶಾರೀಕ್ ಸ್ಪೋಟದ ನಂತರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಬಳಿಕ ಚಿಕಿತ್ಸೆಯ ನಂತರ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದನು. ಶಂಕಿತ ಉಗ್ರ ಶಾರೀಕ್ ಅನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಎನ್ಐಎ ಅಧಿಕಾರಿಗಳು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯವು, ಶಂಕಿತ ಉಗ್ರ ಶಾರೀಕ್ ಅನ್ನು ಮಾರ್ಚ್ 15ರವರೆಗೆ ಎನ್ಐಎ ಅಧಿಕಾರಿಗಳ ವಶಕ್ಕೆ ನೀಡಿ ಆದೇಶಿಸಿತ್ತು.. ತಮ್ಮ ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಯನ್ನು ನಡೆಸಿ, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.