ತುಮಕೂರು: ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಕಿರುಕುಳದಿಂದ ತುಮಕೂರು ಜಿಲ್ಲೆಯ ಸದಾಶಿವನಗರದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಭಾನುವಾರ ನಡೆದಿದೆ.
ಗರೀಬ್‌ಸಾಬ್ (36), ಸುಮಯಾ (30), ಹಾಜೀರಾ ( 14) , ಮಹ್ಮಮದ್ ಶುಭಾನ್ (10) ಮಹ್ಮದ್ ಮುನೀರ್ ( 8) ಮೃತರು. ಶಿರಾ ತಾಲೂಕಿನ ಚಿಕ್ಕನಹಳ್ಳಿಯ ನಿವಾಸಿ ಗರೀಬ್ ಸಾಬ್ ತುಮಕೂರಿನ ಸದಾಶಿವನಗರದಲ್ಲಿ ಕಬಾಬ್ ಅಂಗಡಿ ನಡೆಸುತ್ತಾ, ಜೀವನ ಸಾಗಿಸುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರದಲ್ಲಿ ವಾಸವಿದ್ದರು. ಗರೀಬ್ ಸಾಬ್ ಮನೆಯ ಪಕ್ಕದಲ್ಲಿ ಬಾಡಿಗೆಗೆ ಇದ್ದ ಕಲಂದರ್ ಎಂಬುವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅವರೇ ನಮ್ಮ ಸಾವಿಗೆ ಕಾರಣ ಎಂದು ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾವು ಯಾರ ತಂಟೆಗೂ ಹೋಗುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರು ಕಿರುಕುಳ ನೀಡುತ್ತಿದ್ದರು. ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನಮ್ಮ ದೇಹಗಳನ್ನು ಪೋಸ್ಟ್‌ಮಾರ್ಟಂ ಮಾಡಬೇಡಿ ಎಂದು ವಿಡಿಯೊದಲ್ಲಿ ಮನವಿ ಮಾಡಿದ್ದಾರೆ
ಆದರೆ ಆರೋಪಿ ಖಲಂದರ್ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು ಆತನಿಂದ ಗರೀಬ್ ಸಾಬ್ ಬಡ್ಡಿಗೆ ಸಾಲ ಪಡೆದಿದ್ದರು ಎನ್ನಲಾಗಿದ್ದು, ಇದೇ ವಿಚಾರದಲ್ಲಿ ಖಲಂದರ್ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಎಸ್ಪಿ ಅಶೋಕ್ .ಕೆವಿ ಸ್ಪಷ್ಟನೆ
ನಮಗೆ ರಾತ್ರಿ 7.30ರ ವೇಳೆಗೆ ಒಂದೇ ಮನೆಯಲ್ಲಿ ಐವರು ನೇಣಿಗೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಬಂತು. ಐದು ನಿಮಿಷಕ್ಕೆ ನಾವು ಸ್ಥಳಕ್ಕೆ ಬಂದಾಗ ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೂವರು ಮಕ್ಕಳ ಮೃತ ದೇಹ ಹಾಸಿಗೆಯಲ್ಲಿ ಬಿದ್ದಿದ್ದವು. ಸಾಯುವ ಮುನ್ನ ಸಂಬಂಧಿಕರಿಗೆ ವಿಡಿಯೋ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತುಮಕೂರು ಎಸ್ಪಿ ಅಶೋಕ್ ಕೆ. ವಿ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ ನೀಡಿದ್ದಾರೆ.