ಮಂಗಳೂರು: ಕಾಂಗ್ರೆಸ್ ಪರಿವಾರ ರಾಜಕಾರಣ ಮಾಡುತ್ತಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿ ಸರ್ಕಾರದ ಖಜಾನೆ ಲೂಟಿ ಮಾಡಲು ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವೃ ವಾಗ್ದಾಳಿ ನಡೆಸಿದರು
ಮೂಲ್ಕಿಯಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ವರ್ಷ ನನಗೆ ನಾರಾಯಣಗರು ಮಠದ ಶ್ರೀಗಳ ಆರ್ಶಿವಾದ ಪಡೆಯಲು ಅವಕಾಶ ಸಿಕ್ಕಿತು. ಪೂಜ್ಯರ ಆಶಿರ್ವಾದಿಂದ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸಾಧ್ಯವಾಗಿದೆ. ಕನ್ನಡ ಅನುವಾದಕ್ಕೆ ಜನರು ಬೇಡ ಎಂದಿದ್ದಕ್ಕೆ ಧನ್ಯವಾದಗಳು, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಆದೇಶವನ್ನು ತಲೆಮೇಲೆ ಹೊತ್ತುಕೊಂಡು ಪಾಲಿಸುತ್ತೇವೆ ಎಂದರು.
ಕರ್ನಾಟಕವನ್ನು ಉತ್ಪಾದನೆಯ ಅತಿ ದೊಡ್ಡ ಶಕ್ತಿ ರಾಜ್ಯ ಮಾಡುವ ಸಂಕಲ್ಪ ಮಾಡಿದ್ದೇವೆ. ಕಾಂಗ್ರೆಸ್ ಮತ ಏಕೆ ಕೇಳುತ್ತಿದ್ದಾರೆ ಅಂದರೇ ಅವರ ಒಬ್ಬ ನಾಯಕ ನಿವೃತ್ತಿ ಹೊಂದುತ್ತಿದ್ದಾರೆ. ಅವರನ್ನು ಗೆಲ್ಲಿಸಲು ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ಬಿಜೆಪಿಯ ಎಲ್ಲಾ ಯೋಜನೆಗಳನ್ನು ನಾಶ ಮಾಡಲು ಮತ ಕೇಳುತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.ಯುವ ಹೊಸ ಮತದಾರರು ಕರ್ನಾಟಕದ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ. ಯುವ ಮತದಾರರು ನಿಮ್ಮ ಭವಿಷ್ಯ ಉಜ್ವಲವಾಗಿರಬೇಕಾದರೇ ಬಿಜೆಪಿಗೆ ಮತ ನೀಡಿ. ಕಾಂಗ್ರೆಸ್ನಿಂದ ಇದು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಅಶಾಂತಿಯನ್ನು ಹುಟ್ಟು ಹಾಕುತ್ತದೆ. ಹಾಗೇ ಅಭಿವೃದ್ಧಿ ವಿರುದ್ಧವಾಗಿದೆ. ಕಾಂಗ್ರೆಸ್ ಆತಂಕವಾದಿಗಳನ್ನು ರಕ್ಷಿಸುತ್ತದೆ. ತುಷ್ಟೀಕರಣ ನೀತಿ ಅನುಸರಿಸುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆ? ರಾಜ್ಯವನ್ನು ಬರಬಾದ್ ಮಾಡಬೇಕೆ? ಹಾಗಿದ್ದರೇ ಕಾಂಗ್ರೆಸ್ಗೆ ಮತ ನೀಡಬೇಡಿ. ರಾಣಿ ಅಬ್ಬಕ್ಕ ರೀತಿಯ ನಮ್ಮ ಮಹಿಳೆಯರಲ್ಲೂ ಸಾಮರ್ಥ್ಯ ಇದೆ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇರಲಿಲ್ಲ. ಮಹಿಳೆಯರಿಗಾಗಿ ಶೌಚಾಲಯ ಇರಲಿಲ್ಲ, ಓದಲು ಶಾಲೆಗಳಿರಲಿಲ್ಲ. ಗ್ಯಾಸ್ ಕೊರತೆ ಇತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.
ಕಾಂಗ್ರೆಸ್ 85% ಸರ್ಕಾರವಾಗಿದ್ದು ಯೋಜನೆಗಳಲ್ಲಿ ಹಣವನ್ನು ಲೂಟಿ ಹೊಡೆದಿದೆ. ಇಂತಹ ಭ್ರಷ್ಟರಿಗೆ ಕರ್ನಾಟಕದಲ್ಲಿ ಮತ್ತೆ ಅಧಿಕಾರ ನೀಡಬೇಕೇ ಎಂದು ಪ್ರಶ್ನಿಸಿದರು.
ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವ ಬದಲಿಗೆ ಅವರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಿ ಆರೋಪಿಗಳನ್ನು ಖುಲಾಸೆ ಮಾಡಿರುವ ಕಾಂಗ್ರೆಸ್ ದೇಶದ್ರೋಹಿಗಳ ಪರವಾಗಿದೆ ಎಂದರು.
ಸೇನೆಗೆ ಪರಮಾಧಿಕಾರ ನೀಡಲಾಗಿದೆ, ಶತ್ರುಗಳನ್ನು ಮಟ್ಟ ಹಾಕಲು ಸೇನೆಯನ್ನು ಸಧೃಡಗೊಳಿಸಲಾಗಿದೆ. ಆದರೆ ಕಾಂಗ್ರೆಸ್ ಸೇನೆಯ ಅಧಿಕಾರವನ್ನೇ ಮೊಟಕುಗೊಳಿಸಿ ಸೇನೆಯ ನೈತಿಕ ಸ್ಥೈರ್ಯ ಕುಗ್ಗಿಸಿ ಅಪಮಾನ ಮಾಡಿದೆ.ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ,ಇದಕ್ಕೆ ಕಾರಣ ನರೇಂದ್ರ ಮೋದಿಯಲ್ಲ ದೇಶದ ಪ್ರತಿಯೊಬ್ಬ ಮತದಾರ ನೀಡಿದ ಮತದಿಂದ ಇದು ಸಾಧ್ಯವಾಗಿದೆ ಎಂದು ಮೋದಿ ಬಣ್ಣಿಸಿದರು.
ನಾವು ಬಡವರಿಗಾಗಿ ತಲಾ 8 ಲಕ್ಷ ವೆಚ್ಚದಲ್ಲಿ ಉಚಿತ ಮನೆ ನಿರ್ಮಾಣ ಯೋಜನೆ ಮಾಡಿದೆ. ಮೀನುಗಾರಿಕೆ ಪ್ರತ್ಯೇಕ ಇಲಾಖೆ ಆರಂಭಿಸಲಾಗಿದೆ,ಅಲ್ಲದೇ ಮೀನುಗಾರರ ಕಲ್ಯಾಣಕ್ಕಾಗಿ ಮತ್ಸ್ಯ ಸಂಪದ,ಕರ್ನಾಟಕ ಮತ್ಯ ಸಿರಿ ಯೋಜನೆ ಜಾರಿಗೊಳಿಸಿದೆ.ಆದರೆ ಮೀನುಗಾರರಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಆರ್ಥಿಕತೆ ಹಬ್ ಅಗಿವೆ ಅಲ್ಲದೇ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿವೆ. ಕರ್ನಾಟಕದಲ್ಲಿ 1 ಲಕ್ಷ ಮಿಕ್ಕಿ ಸ್ಟಾರ್ಟ್ ಅಪ್ ಮೂಲಕ ಉದ್ಯಮ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ ಎಂದರು.ಇದರ ಜತೆಗೆ ಬಾಹ್ಯಾಕಾಶದಲ್ಲಿ ಕರ್ನಾಟಕ ಅದ್ವಿತೀಯ ಸಾಧನೆಗೈದಿದೆ ಎಂದು ಶ್ಲಾಘಿಸಿದರು.
ಭಾರತ ಪ್ರಸ್ತುತ ವಿಶ್ವದಲ್ಲಿ ಆರ್ಥಿಕತೆಯಲ್ಲಿ 5 ನೇ ಸ್ಥಾನದಲ್ಲಿದ್ದು ಇದನ್ನು3 ನೇ ಏರಿಸಲು ನಿಮ್ಮ ಸಹಕಾರ ಅಗತ್ಯ, ಆದ್ದರಿಂದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಗೆಲ್ಲಿಸಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಮನೆಮನೆಗೆ ತೆರಳಿ ಮೋದಿ ದೆಹಲಿಯಿಂದ ಮೂಲ್ಕಿಗೆ ಬಂದಿದ್ದಾರೆ ನಿಮಗೆ ಪ್ರಣಾಮಗಳನ್ನು ಸಲ್ಲಿಸಿದ್ದಾರೆ, ಆದ್ದರಿಂದ ಮೋದಿಯವರಿಗೆ ಮತ ನೀಡಬೇಕು ಎಂದು ಮನವಿ ಮಾಡಬೇಕು ಎಂದರು.
ಭಜರಂಗಬಲಿ ಕೀ ಜೈ ಎನ್ನುತ್ತಲೇ ಭಾಷಣ ಆರಂಭಿಸಿದ ಮೋದಿ ಭಜರಂಗದಳವನ್ನು ನಿಷೇಧಿಸುವ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.