ಬೆಳಗಾವಿ: ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಅಸ್ತಿತ್ವದಲ್ಲೇ ಇಲ್ಲ, ಇದ್ದರೆ ಎಲ್ಲಿದೆ ಎಂದು ನೀವೇ ಹೇಳಿ ಎಂದು ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಮರುಪ್ರಶ್ನೆ ಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪೂರ್ಣಪ್ರಮಾಣದಲ್ಲಿ ವಿಸ್ತರಣೆ ಆಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಕಾಂಗ್ರೆಸ್ ವಿಸ್ತರಣೆ ಮಾತ್ರ ಅಲ್ಲ ದಕ್ಷಿಣ ಭಾರತದಲ್ಲಿ ಬಿಜೆಪಿಯೇ ಇಲ್ಲ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ನಾಯಕರು ಇದೀಗ ಭ್ರಮನಿರಸನರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತೆಲಂಗಾಣದ ನೂತನ ಸಿಎಂ ರೇವಂತ ರೆಡ್ಡಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪರಿಶಿಷ್ಟ ಜಾತಿ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದ ಎಸ್ಇಪಿ/ಟಿಎಸ್ಪಿ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಿಂದ ಕಾರಜೋಳ ಅವರ ಕಾಲದಲ್ಲಿ ಎಸ್ಇಪಿ/ಟಿಎಸ್ಪಿ ಹಣ ಯಾಕೆ ಕಡಿಮೆಯಿತ್ತು ಎಂದು ಅವರು ಹೇಳಬೇಕು. ನನ್ನ ಹಿಂದಿನ ಸರ್ಕಾರದ ಅವಧಿಯಲ್ಲಿ ಕೊನೆಯ ಬಜೆಟ್ ಮಂಡಿಸಿದಾಗ 30 ಸಾವಿರ ಕೋಟಿ ಇತ್ತು. ಇವರ ಕಾಲದಲ್ಲಿ 25 ಸಾವಿರ ಕೋಟಿ ಆಯ್ತು. ಅದು ಯಾಕೆ ಕಡಿಮೆಯಾಗಿದೆ ಎಂದು ಬಿಜೆಪಿಯವರು ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು. 7ಡಿ ಕಲಂ ಅನ್ನು ನೀವು ಹಿಂದೆ ಸಿಎಂ ಆಗಿದ್ದಾಗ ರದ್ದು ಮಾಡುವುದಾಗಿ ಭರವಸೆ ನೀಡಿದ್ದೀರಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, 7ಡಿ ಕಲಂ ರದ್ದು ಮಾಡಿ ಆದೇಶವನ್ನು ಶೀಘ್ರವೇ ಹೊರಡಿಸಲಾಗುವುದು ಎಂದರು. ಇದೇ ವೇಳೆ ಭಾರೀ ವೈರಲ್ ಆಗುತ್ತಿರುವ ಪೀರಾ ಮೌಲಿ ಜೊತೆಗೆ ಐಸಿಸ್ ನಂಟಿದೆ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅವರ ಜತೆಗಿನ ನನ್ನ ಸಂಬಂಧ ಇತ್ತೀಚಿನದಲ್ಲಿ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು ಎಂದ ಸಿಎಂ, ಯತ್ನಾಳ್ ಓರ್ವ ದ್ವೇಷದ ರಾಜಕಾರಣಿ, ಅಲ್ಪಸಂಖ್ಯಾತರ ವಿರೋಧಿ ರಾಜಕಾರಣ ಮಾಡ್ತಾರೆ. ಅವರು ಚುಣಾವಣೆ ಗೆಲ್ಲಲು ಈ ರೀತಿ ಮಾತನಾಡಬಾರದು. ಯತ್ನಾಳ್ ಒಬ್ಬ ಮಹಾನ್ ಸುಳ್ಳುಗಾರ. ಹಸ್ಮಿಯವರು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ,ತಾಕತ್ತಿದ್ರೆ ಮೊದಲು ಅದನ್ನು ಸಾಬೀತುಪಡಿಸಲಿ, ಬರೀ ಆರೋಪ ಮಾಡೋದಲ್ಲ ಅವರದ್ದೇ ಸರ್ಕಾರ ಇದೆ ತಿರುಗೇಟು ನೀಡಿದರು.