Share this news

ಮಂಗಳೂರು : ತಾಲೂಕಿನ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಲ ಬದಿಯಲ್ಲಿರುವ, ಸ್ಥಳೀಯರು ಆನೆಕಲ್ಲು ಎಂದು ಕರೆಯುವ ಬಂಡೆಯಲ್ಲಿ ತುಳು ಶಾಸನವೊಂದನ್ನು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಉಡುಪಿಯ ವೇದಮೂರ್ತಿ ಸಗ್ರಿ ಗೋಪಾಲಕೃಷ್ಣ ಸಾಮಗ ಅವರು ಮಾರ್ಗದರ್ಶನದಲ್ಲಿ ಪತ್ತೆಹಚ್ಚಿದ್ದಾರೆ.

ದೇವಾಲಯದ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಈ ಬಂಡೆಯ ಸುತ್ತಲೂ ಮಣ್ಣು ಜಮಾವಣೆಯಾಗಿದ್ದು, ಪ್ರಸ್ತುತ ಈ ಶಾಸನದಲ್ಲಿ 5 ರಿಂದ 6 ಸಾಲಿನ ಅಸ್ಪಷ್ಟ ತುಳು ಲಿಪಿಯು ಗೋಚರವಾಗಿದ್ದು ಉಳಿದ ಸಾಲುಗಳು ಮಣ್ಣಿನಲ್ಲಿ ಹೂತುಹೋಗಿದೆ. ಈ ಶಾಸನದ ಹೆಚ್ಚುವರಿ ಅಧ್ಯಯನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕೃಷ್ಣಯ್ಯ ಅವರು ಹೇಳಿದ್ದಾರೆ. ಶಾಸನದ ಪ್ರಾಥಮಿಕ ಅಧ್ಯಯನವನ್ನು ಮಾಡಿರುವ ತುಳುಲಿಪಿ ಶಾಸ್ತ್ರಜ್ಞರಾದ ಡಾ. ರಾಧಾಕೃಷ್ಣ ಬೆಳ್ಳೂರು ಅವರು ಲಿಪಿಯ ಆಧಾರದ ಮೇಲೆ ಈ ಶಾಸನವು 12-13ನೆ ಶತಮಾನಕ್ಕೆ ಸೇರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಗೆ ರವಿ ಸಂತೋಷ್ ಆಳ್ವ ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.

ಶಾಸನದ ಮಹತ್ವ:
ದರೆಗುಡ್ಡೆಯಲ್ಲಿ ಪತ್ತೆಯಾದ 12-13ನೆ ಶತಮಾನದ ಈ ಶಾಸನವು ತುಳುನಾಡಿನ ಎರಡನೆಯ ಬಂಡೆಗಲ್ಲು ಶಾಸನವಾಗಿದೆ. ಮೊದಲ ಶಾಸನವು ಮೂಡುಕೊಣಜೆಯ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದ ಆವರಣದಲ್ಲಿರುವ ಬಂಡೆಯಲ್ಲಿ ಪತ್ತೆಯಾಗಿದೆ. ಇದರ ವಿಶೇಷವೆಂದರೆ ಬೇರೆ ಬೇರೆ ಸ್ಥಳಗಳಲ್ಲಿರುವ (ದರೆಗುಡ್ಡೆ ಮತ್ತು ಮೂಡುಕೊಣಜೆ) ಇಟಲ ಶ್ರೀ ಸೋಮನಾಥೇಶ್ವರ ದೇವಾಲಯ ಎಂಬ ಒಂದೇ ಹೆಸರಿನ ಎರಡೂ ದೇವಾಲಯಗಳಲ್ಲಿ ಈ ಶಾಸನಗಳು ಪತ್ತೆಯಾಗಿರುವುದು. ಅಲ್ಲದೇ ಒಂದೇ ಕಾಲಮಾನಕ್ಕೆ (12-13ನೆ ಶತಮಾನ) ಒಳಪಡುವ ಈ ಎರಡೂ ಶಾಸನಗಳನ್ನು ಬಂಡೆಯಲ್ಲಿ ಕೊರೆದಿರುವುದು ತುಳು ಶಾಸನಗಳ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ (ಇತಿಹಾಸ ಮತ್ತು ಪುರಾತತ್ವ ಸಂಶೋಧಕರು, ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್) ಹೇಳಿದ್ದಾರೆ.

ದೇವಾಲಯ ವೈಶಿಷ್ಟ್ಯ:
ದೇವಾಲಯದ ಎಡ ಭಾಗದಲ್ಲಿರುವ ಬಂಡೆಯ ಕೆಳಗೆ ಗಣಪತಿ ವಿಗ್ರಹವಿದ್ದು, ವರ್ಷಪೂರ್ತಿ ಈ ವಿಗ್ರಹಕ್ಕೆ ನೈಸರ್ಗಿಕ ನೀರಿನ ಅಭಿಷೇಕವಾಗುತ್ತದೆ (ಮೂಡುಕೊಣಜೆಯ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದಲ್ಲಿಯು ಇದನ್ನು ಕಾಣಬಹುದು). ಹಾಗೆಯೇ ದೇವಾಲಯದ ಆವರಣದಲ್ಲಿರುವ ಮೂರು ಜಲಕುಂಡಗಳಲ್ಲಿ ನೂರಾರು ವರ್ಷಗಳಿಂದ ನೀರು ಬರಿದಾಗಿದ್ದೇ ಇಲ್ಲ ಹಾಗೂ ಇದೊಂದು ಪ್ರಕೃತಿ ವಿಸ್ಮಯದ ತಾಣವೂ ಆಗಿದೆ ಎಂದು ಪ್ರವೀಣ್‌ಚಂದ್ರ ಜೈನ್ ಹಾಗೂ ಪರಿಸರ ಚಿಂತಕರಾದAತಹ ವಜ್ರನಾಥ ಹೆಗ್ಗಡೆ ಹೇಳಿದ್ದಾರೆ

Leave a Reply

Your email address will not be published. Required fields are marked *