ಕಾರ್ಕಳ: ಇ-ಕಾಮರ್ಸ್ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ರಾಜ್ಯ ಬಜೆಟ್ ನಲ್ಲಿ 2 ಲಕ್ಷ ರೂಪಾಯಿ ಜೀವವಿಮೆ ಹಾಗೂ 2 ಲಕ್ಷ ರೂಪಾಯಿ ಅಪಘಾತ ಪರಿಹಾರ ವಿಮೆ ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹ, ಆದರೆ ಈ ಸೌಲಭ್ಯವನ್ನು ಮನೆಮನೆಗೆ ದಿನಪತ್ರಿಕೆ ಹಾಗೂ ಹಾಲು ವಿತರಿಸುವ ಕಾರ್ಮಿಕರಿಗೂ ವಿಸ್ತರಿಸಬೇಕೆಂದು ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.
ತಮ್ಮ ಜೀವನ ನಿರ್ವಹಣೆಗಾಗಿ ಹಾಗೂ ಆರ್ಥಿಕ ಸಂಕಷ್ಟದಿAದ ವರ್ಷದ 365 ದಿನವೂ ಮಳೆ,ಗಾಳಿ,ಚಳಿ ಎನ್ನದೇ ಮುಂಜಾನೆ ಪತ್ರಿಕೆಗಳನ್ನು ಹಾಗೂ ಪತ್ರಿಕಾ ವಿತರಿಸುವ ಕಾರ್ಮಿಕರ ಕೆಲಸ ಅತ್ಯಂತ ಸವಾಲಿನದ್ದಾಗಿದೆ. ಮುಂಜಾನೆ ಬೀದಿನಾಯಿಗಳ ಕಾಟ, ನಿದ್ದೆಗಣ್ಣಿನಲ್ಲಿ ವಾಹನ ಚಲಾಯಿಸುವ ಚಾಲಕರಿಂದ ಅಪಘಾತ ಸಂಭವಿಸುವ ಭೀತಿ, ಕಗ್ಗತ್ತಲಿನಲ್ಲಿ ಪತ್ರಿಕೆ ವಿತರಣೆ ಹೀಗೆ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುವ ವಿತರಕರ ಶ್ರಮವನ್ನು ಗುರುತಿಸುವುದು ಕೂಡ ಅತಿ ಮುಖ್ಯ.
ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದ ಸಮಯದಲ್ಲಿ ಒಂದು ದಿನವೂ ವಿರಮಿಸದೆ ದಿನಪತ್ರಿಕೆಯನ್ನು ಮನೆಮನೆಗಳಿಗೆ ತಲುಪಿಸುತ್ತಿದ್ದ ಪತ್ರಿಕಾ ವಿತರಕರು ಹಾಗೂ ಹಾಲು ಪೂರೈಕೆ ಮಾಡುವವರನ್ನು ಕೋವಿಡ್ ವಾಯಿರ‍್ಸ್ ಎಂದು ಗುರುತಿಸಿತ್ತುಜೀವದ ಹಂಗು ತೊರೆದು ಇವರು ಸಲ್ಲಿಸಿದ ಸೇವೆಗೆ ಜನಸಮುದಾಯದಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.ಆದರೆ ಈ ಅಸಂಘಟಿತ ಕಾರ್ಮಿಕರಿಗೆ ಪತ್ರಿಕಾ ಸಂಸ್ಥೆಗಳು ನೀಡುವ ಅಲ್ಪಮೊತ್ತದ ಸಂಭಾವನೆ ಹಾಗೂ ಹಾಲು ಹಾಕುವವರಿಗೆ ಅವರ ಯಜಮಾನರು ನೀಡುವ ಸಂಬಳದ ಹೊರತಾಗಿ ಬೇರೆ ಯಾವುದೇ ಸೌಲಭ್ಯಗಳು ಇಲ್ಲ.
ಮುಂಜಾನೆಯ ಹೊತ್ತಲ್ಲಿ ನಿದ್ದೆಗಣ್ಣಿನಲ್ಲಿ ಕೆಲಸದ ಧಾವಂತದಲ್ಲಿ ಆರೋಗ್ಯ ಹದಗೆಟ್ಟರೆ, ಆಕಸ್ಮಿಕ ಅಪಘಾತ ಸಂಭವಿಸಿದರೆ ಆರೋಗ್ಯ ಭದ್ರತೆ ಪಡೆಯಲು ಸೂಕ್ತ ವ್ಯವಸ್ಥೆಗಳು ಇಲ್ಲ. ಆದ್ದರಿಂದ ಇವರನ್ನು ಅಸಂಘಟಿತ ವಲಯದ ಕಾರ್ಮಿಕರ ವ್ಯಾಪ್ತಿಗೆ ಸೇರಿಸಿ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರ ಮುಂದಾಗಬೇಕಿದೆ, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಶಾಸಕರು ಪಕ್ಷ ಭೇದ ಮರೆತು ರಾಜ್ಯ ಸರಕಾರಕ್ಕೆ ಒತ್ತಾಯಿಸಬೇಕೆಂದು ಸಹಕಾರ ಭಾರತಿ ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕರಾದ ಶ್ರೀ ಸಾಣೂರು ನರಸಿಂಹ ಕಾಮತ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ