ಬೆಂಗಳೂರು: ಜೆಡಿಎಸ್ ಎಂ ಎಲ್ ಸಿ ಭೋಜೇಗೌಡ ಅವರ ಕಾರಿನ ನಂಬರ್ ಪ್ಲೇಟ್ ಬಳಸಿದ ಆರೋಪದಲ್ಲಿ ದಾಖಲಾಗಿದ್ದ ದೂರಿನ ವಿಚಾರಣೆ ನಡೆಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಫಾರ್ಚುನರ್ ಕಾರುಗಳನ್ನೇ ಟಾರ್ಗೆಟ್ ಮಾಡಿ ಕದ್ದು, ಮಾರಾಟ ಮಾಡುತ್ತಿದ್ದ 6 ಅಂತರರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ 3 ಕೋಟಿ ಮೌಲ್ಯದ 8 ದುಬಾರಿ ಬೆಲೆಯ ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಂ ಎಲ್ ಸಿ ಬೋಜೇಗೌಡ ಅವರ ನಂಬರ್ ಪ್ಲೇಟ್ ಹಾಕಿಕೊಂಡಿದ್ದ ಫಾರ್ಚುನರ್ ಕಾರು ಮಾರಾಟಕ್ಕೆ ಇಟ್ಟಿದ್ದ ಹಿನ್ನಲೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ತನಿಖೆಗೆ ಇಳಿದಿದ್ದರು. ಪ್ರಕರಣ ಸಂಬಂಧ ಫಾರ್ಚುನರ್ ಕಾರು ಕದ್ದು, ಅದಕ್ಕೆ ಫ್ಯಾನ್ಸಿ ನಂಬರ್ ಗಳನ್ನು ನೀಡಿ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.
ನಸೀಬ್, ಮಂಜುನಾಥ್, ಶಾಬಾಝ್ ಖಾನ್, ಸೈಯದ್ ರಿಯಾಝ್, ಇಮ್ರಾನ್ ಹಾಗೂ ನಯಾಝ್ ಖಾನ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ ದುಬಾರಿ ಬೆರೆಯ ಫಾರ್ಚುನರ್ ಸೇರಿದಂತೆ ಇತರೆ ಕಾರುಗಳನ್ನು ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಂತ ಮಾಹಿತಿ ತಿಳಿದು ಬಂದಿದೆ.
ಈ ಸಂಬಂಧ ಆರು ಮಂದಿ ಅಂತರ ರಾಜ್ಯ ಕಳ್ಳರನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳ ಮಾಹಿತಿಯ ಆಧಾರ ಮೇಲೆ ಬರೋಬ್ಬರಿ 3 ಕೋಟಿ ಮೌಲ್ಯದ 8 ಕಾರುಗಳನ್ನು ವಶ ಪಡಿಸಿಕೊಂಡಿದ್ದಾರೆ.